ನಕಲಿ ಜಿಎಸ್‌ಟಿ ಬಿಲ್ ತಯಾರಿಸಿ ತೆರಿಗೆ ವಂಚನೆ- ಇಬ್ಬರ ಬಂಧನ
ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗವು ‘ನಕಲಿ ಜಿಎಸ್‌ಟಿ ಬಿಲ್ ಆಪರೇಟರ್‌ಗಳ’ ಜಾಲವನ್ನು ಭೇದಿಸಿದ್ದು, ಇದು ಮಾನವ ಸಂಪನ್ಮೂಲ ಮತ್ತು ಕಾರ್ಮಿಕ ಪೂರೈಕೆಯಂತಹ ಸೇವಾ ವಲಯದ ಕಂಪನಿಗಳಿಗೆ ನಕಲಿ ಇನ್‌ಪುಟ್ ತೆರಿಗೆ ಕ್ರೆಡಿಟ್ (ಐಟಿಸಿ) ಪಡೆಯಲು ಮತ್ತು ವಹಿವಾಟನ್ನು ಕೃತಕವಾಗಿ ಹೆಚ್ಚಿಸಲು ಸಹಾಯ ಮಾಡಲು ಸಿಂಡಿಕೇಟ್ ಅನ್ನು ನಡೆಸುತ್ತಿತ್ತು.
ಕುಟುಂಬ ಸದಸ್ಯರು, ಸಂಬಂಧಿಕರು, ಸ್ನೇಹಿತರು ಮತ್ತು ಇತರ ವ್ಯಕ್ತಿಗಳ ಗುರುತಿನ ದಾಖಲೆಗಳನ್ನು ಬಳಸಿಕೊಂಡು ಸುಮಾರು 30 ನಕಲಿ ಕಂಪನಿಗಳನ್ನು ಸೃಷ್ಟಿಸಿರುವುದು ತನಿಖೆಯಿಂದ ತಿಳಿದುಬಂದಿದೆ.
ಈ ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾದ ಸಿ. ಶಿಖಾ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, 30ಕ್ಕೂ ಹೆಚ್ಚು ನಕಲಿ ಕಂಪೆನಿಗಳ ಹೆಸರಿನಲ್ಲಿ ಬಿಲ್‌ಗಳನ್ನು ಸೃಷ್ಟಿಸಿ 525 ಕೋಟಿ ರೂ. ಅವ್ಯವಹಾರ ಮಾಡಿರುವುದು ಪತ್ತೆಯಾಗಿದೆ. ಇದರಿಂದ ಸರ್ಕಾರಕ್ಕೆ 90 ಕೋಟಿ ರೂ. ತೆರಿಗೆ ನಷ್ಟ ಉಂಟಾಗಿದೆ. ಈ ಜಾಲವು ಮಾನವಸಂಪನ್ಮೂಲ ಹಾಗೂ ಕಾರ್ಮಿಕರ ಪೂರೈಕೆಯಂತಹ ಸೇವಾ ವಲಯದ ಕಂಪೆನಿಗಳಿಗೆ ನಕಲಿ ತೆರಿಗೆ ಜಮೆ, ವರ್ಗಾವಣೆಗಳ ಬಿಲ್‌ಗಳನ್ನು ಸೃಷ್ಟಿಸಿ ನೀಡುತ್ತಿತ್ತು. ಸೇವಾ ವಲಯದಲ್ಲಿ ನಕಲಿ ಬಿಲ್ ತಯಾರಿಕೆ ಜಾಲವನ್ನು ಇದೇ ಮೊದಲ ಬಾರಿಗೆ ಪತ್ತೆ ಹಚ್ಚಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳು ಬುಧವಾರ ಬೆಳಗ್ಗೆ ಇದರ ಹಿಂದಿರುವ ಇಬ್ಬರು ಮಾಸ್ಟರ್ ಮೈಂಡ್‌ಗಳನ್ನು ಬಂಧಿಸಿದ್ದು, ಪ್ರಕರಣದಲ್ಲಿ ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ. ವಾಣಿಜ್ಯ ತೆರಿಗೆ ಇಲಾಖೆಯು ನಕಲಿ ಬಿಲ್ ಮತ್ತು ತೆರಿಗೆ ವಂಚಕರ ವಿರುದ್ಧ ಕಠಿಣ ಕ್ರಮಕ್ಕೆ ಚಿಂತನೆ ನಡೆಸುತ್ತಿದೆ.
ನಕಲಿ ಬಿಲ್ ತಯಾರಿಕೆ ಹಾಗೂ ತೆರಿಗೆ ವಂಚನೆಯು ಜಿಎಸ್‌ಟಿ ಕಾನೂನಿನ ಅಡಿ ಶಿಕ್ಷಾರ್ಹ ಅಪರಾಧವಾಗಿದ್ದು, ಬಂಧನ, ದಂಡ, ಆಸ್ತಿ ಮುಟ್ಟುಗೋಲು, ಬ್ಯಾಂಕ್ ಖಾತೆಗಳ ಮುಟ್ಟುಗೋಲಿನಂತಹ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ಹೀಗಾಗಿ ಜಿಎಸ್‌ಟಿ ಕಾನೂನನ್ನು ಯಾರೂ ಉಲ್ಲಂಘಿಸಬಾರದು ಎಂದು ಹೇಳಿಕೆ ತಿಳಿಸಿದೆ.