ಅಮಾಸೆಬೈಲು: ಠಾಣಾ ಭದ್ರತೆಗೆ ನಿಯೋಜಿಸಲ್ಪಟ್ಟ ಆರ್‌ಎಸ್‌ಐ ಆತ್ಮಹತ್ಯೆ
ಕುಂದಾಪುರ: ಪೊಲೀಸ್ ಠಾಣೆಯಲ್ಲಿ ಭದ್ರತಾ ಕರ್ತವ್ಯಕ್ಕಾಗಿ ನಿಯೋಜಿಸಲಾದ ಪೊಲೀಸರ ರಿಸರ್ವ್ ಸಬ್ ಇನ್ಸ್‌ಪೆಕ್ಟರ್ (ಆರ್‌ಎಸ್‌ಐ) ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.
ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಭದ್ರತಾ ಕರ್ತವ್ಯಕ್ಕಾಗಿ ನಿಯೋಜಿಸಲಾದ ಆರ್‌ಎಸ್‌ಐ ಮಲ್ಲಿಕರ್ಜುನ್ ಗುಬ್ಬಿ (56) ಎಂಬುವವರು ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿ. ಇವರು ಕಲಬುರಗಿಯ ನೌರುಗಂಜ್ ನಿವಾಸಿಯಾಗಿದ್ದು ಕುಂದಾಪುರ ವ್ಯಾಪ್ತಿಯಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದರು.
ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ಪಡೆಯ ಆರ್‌ಎಸ್‌ಐ ಸಿಬ್ಬಂದಿಯಾಗಿದ್ದ ಮಲ್ಲಿಕರ್ಜುನ್ ಮೇ 15 ರಂದು ನಕ್ಸಲ್ ಚಟುವಟಿಕೆ ಇರುವ ಅಮಾಸೆಬೈಲು ಪೊಲೀಸ್ ಠಾಣೆಗೆ ಆಗಮಿಸಿದ್ದರು. ಗುರುವಾರ ರಾತ್ರಿ ಅವರು ಕ್ವಾರ್ಟರ್ಸ್ನಲ್ಲಿ ಮಲಗಲು ಹೋಗಿದ್ದು ಬೆಳಿಗ್ಗೆ ಅಲ್ಲಿ ಇರಲಿಲ್ಲ. ಆಗ ಪೋಲೀಸ್ ಸಿಬ್ಬಂದಿ ಅವರ ಶೋಧ ನಡೆಸಿದ್ದಾರೆ. ಆದರೆ ಸಿಕ್ಕಿರಲಿಲ್ಲ. ಆಗ ಡೈರಿಗೆ ಹಾಲು ಕೊಡಲು ಹೋಗಿದ್ದ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ ನಂತರ, ಪೊಲೀಸರು ಸ್ಥಳಕ್ಕೆ ಧಾವಿಸಿ, ಮರಕ್ಕೆ ನೇಣು ಬಿಗಿದುಕೊಂಡಿದ್ದ ಮಲ್ಲಿಕಾರ್ಜುನ್ ನನ್ನು ಗುರುತಿಸಿದ್ದಾರೆ.
ಮಲ್ಲಿಕಾರ್ಜುನ್ ಕಳೆದ 29 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರನ್ನು ಮೂರು ತಿಂಗಳ ಹಿಂದೆ ಕೊಪ್ಪಳ ಜಿಲ್ಲೆ ಮುನಿರಾಬಾದ್ ಠಾಣೆಗೆ ವರ್ಗಾಯಿಸಲಾಯಿತು. ಪೊಲೀಸ್ ಠಾಣೆಗಳಿಗೆ ಭದ್ರತೆ ಒದಗಿಸಲು ಕೆಎಸ್‌ಆರ್‌ಪಿ ಸಿಬ್ಬಂದಿಯನ್ನು 15 ದಿನಗಳಿಗೊಮ್ಮೆ ರೊಟೀನ್ ಆಧಾರದ ಮೇಲೆ ನಕ್ಸಲ್ ಪ್ರದೇಶದ ಪೊಲೀಸ್ ಠಾಣೆಗಳಿಗೆ ನಿಯೋಜಿಸಲಾಗುತ್ತದೆ. ಮೇ 16 ರಿಂದ ಮಲ್ಲಿಕಾರ್ಜುನ್ ಅವರನ್ನು ಇಲ್ಲಿ ನಿಯೋಜಿಸಲಾಗಿತ್ತು. ಇನ್ನು ಶನಿವಾರ ಅವರು ಮತ್ತೆ ಮುನಿರಾಬಾದ್‌ಗೆ ಠಾಣೆಗೆ ಮರಳುವವರಿದ್ದರು.
ಮೃತರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದು, ಆತ್ಮಹತ್ಯೆಗೆ ಕಾರಣ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.