ಸೆ.2ರಂದು ಶ್ರೀಹರಿಕೋಟಾದಿಂದ ಸೂರ್ಯನ ಅಂಗಳಕ್ಕೆ ಆದಿತ್ಯಾ-ಎಲ್1 ಉಡಾವಣೆ
ಬೆಂಗಳೂರು: ಚಂದ್ರಯಾನ-3 ಯಶಸ್ಸಿನ ಖುಷಿಯಲ್ಲಿರುವ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇದೇ ಹುರುಪಿನಲ್ಲೇ ತನ್ನ ಬಹು ನಿರೀಕ್ಷಿತ ಸೂರ್ಯಯಾನ ಯೋಜನೆ ಉಡಾವಣೆಗೆ ಮುಹೂರ್ತ ಫಿಕ್ಸ್ ಮಾಡಿದೆ.
ಸೂರ್ಯನನ್ನು ಅಧ್ಯಯನ ಮಾಡುವ ಆದಿತ್ಯ ಎಲ್ 1 ಗಗನನೌಕೆಯನ್ನು ಸೆಪ್ಟೆಂಬರ್ 2 ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಮಾಹಿತಿ ನೀಡಿದೆ. ಸೆಪ್ಟೆಂಬರ್ 2 ಶನಿವಾರ ಬೆಳಗ್ಗೆ 11:50ಕ್ಕೆ PSLV-C57 ಉಡಾವಣಾ ನೌಕೆಯ ಮೂಲಕ ಆದಿತ್ಯಾ ಎಲ್ 1 ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತದೆ. ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಈ ಉಡಾವಣೆ ನಡೆಯಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಆದಿತ್ಯ-L1 ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಬಾಹ್ಯಾಕಾಶ ಆಧಾರಿತ ಭಾರತೀಯ ವೀಕ್ಷಣಾಲಯ. ಇದು ಭೂಮಿಯಿಂದ ಸರಿಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಸೂರ್ಯನ ಲ್ಯಾಗ್ರೇಂಜ್ ಪಾಯಿಂಟ್ 1 (L1) ಸುತ್ತ ಹಾಲೋ ಕಕ್ಷೆಯಲ್ಲಿ ನೆಲೆಗೊಳ್ಳಲಿದೆ. ಉಡಾವಣೆಯ ಬಳಿಕ L1 ಪಾಯಿಂಟ್‌ಗೆ ಪ್ರಯಾಣಿಸಲು ಸುಮಾರು 120 ದಿನಗಳನ್ನು ತೆಗೆದುಕೊಳ್ಳುತ್ತದೆ. ಆ ಬಳಿಕ ಸೂರ್ಯನ ಕುರಿತು ಅಭೂತಪೂರ್ವ ಒಳನೋಟಗಳನ್ನು ಒದಗಿಸುವ ಗುರಿ ಹೊಂದಿದೆ.
ಉಪಗ್ರಹದಲ್ಲಿನ ಪೆಲೋಡ್ಗಳನ್ನು ಸೂರ್ಯನಿಂದ ಹೊರಸೂಸುವ ಅತ್ಯಂತ ಶಕ್ತಿಶಾಲಿ ಕಿರಣಗಳನ್ನು ಅಧ್ಯಯನ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ಇವುಗಳು ದ್ಯುತಿಗೋಳ, ವರ್ಣಗೋಳ, ಸೂರ್ಯನ ಹೊರ ಪದರಗಳು, ಸೌರ ಶಕ್ತಿ ಕೋಶಗಳು ಮತ್ತು ಸೂರ್ಯನ ಕಾಂತಕ್ಷೇತ್ರವನ್ನು ಅಧ್ಯಯನ ನಡೆಸಲಿವೆ.
ಬಾಹ್ಯಾಕಾಶ ನೌಕೆಯು ಸೂರ್ಯನ ವಿವಿಧ ಪದರಗಳಾದ ದ್ಯುತಿಗೋಳ ಮತ್ತು ಕ್ರೋಮೋಸ್ಪಿಯರ್‌ನಿಂದ ಹೊರಗಿನ ಪದರವಾದ ಕರೋನಲ್ವರೆಗೆ ಸೂಕ್ಷ್ಮವಾಗಿ ಪರಿಶೀಲಿಸಲು ವಿನ್ಯಾಸಗೊಳಿಸಲಾದ ಏಳು ಸುಧಾರಿತ ಪೇಲೋಡ್‌ಗಳನ್ನು ಹೊಂದಿದೆ. ಕರೋನಲ್ ಹೀಟಿಂಗ್, ಕರೋನಲ್ ಮಾಸ್ ಇಜೆಕ್ಷನ್‌ಗಳು, ಸೌರ ಜ್ವಾಲೆಗಳು ಮತ್ತು ಹೆಚ್ಚಿನ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಪ್ರಮುಖವಾದ ದತ್ತಾಂಶ ಸಂಗ್ರಹಿಸವು ಈ ಪೇಲೋಡ್‌ಗಳು ವಿದ್ಯುತ್ಕಾಂತೀಯ, ಕಣ ಮತ್ತು ಮ್ಯಾಗ್ನೆಟಿಕ್ ಫೀಲ್ಡ್ ಡಿಟೆಕ್ಟರ್‌ಗಳನ್ನು ಬಳಸಿಕೊಳ್ಳುತ್ತವೆ.