ಸೆ.28ರ ಬಂದ್ ಗೆ ಉಡುಪಿಯ 14 ಸಂಘಟನೆಗಳಿಂದ ಬೆಂಬಲ: ಬಾಲಕೃಷ್ಣ ಶೆಟ್ಟಿ

ಉಡುಪಿ (ಉಡುಪಿ ಟೈಮ್ಸ್ ವರದಿ) :ಉಡುಪಿ: ಕೇಂದ್ರ ಸರ್ಕಾರದ ರೈತ, ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಸೆಪ್ಟೆಂಬರ್ 28ರ ಸೋಮವಾರ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದ್ದು, ಉಡುಪಿ ಜಿಲ್ಲೆಯ 14 ಸಂಘಟನೆಗಳು ಬೆಂಬಲ ನೀಡಲಿವೆ ಎಂದು  ಸಿಪಿಐ ಎಮ್ ನ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ತಿಳಿಸಿದರು.


ಅವರು ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರತಿಭಟನೆಗೆ ಕಾಂಗ್ರೆಸ್ ಸೇರಿದಂತೆ ಜೆಡಿಎಸ್, ಕೆಆರ್ ಎಸ್ ಪಕ್ಷ, ಕಾಂಗ್ರೆಸ್ ಕಿಸಾನ್ ಘಟಕ, ಕರ್ನಾಟಕ ಪ್ರಾಂತ ರೈತ ಸಂಘ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಜನತಾದಳ (ಜಾತ್ಯಾತೀತ) , ದಲಿತ ಸಂಘರ್ಷ ಸಮಿತಿ, ಭಾರತ ಕಮ್ಯುನಿಸ್ಟ್ ಪಕ್ಷ  ಮಾರ್ಕ್ಸ್ ವಾದಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಸಹಬಾಳ್ವೆ ಉಡುಪಿ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ,ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ,ಸಿ.ಐ.ಟಿ ಯು, ಉಡುಪಿ ಜಿಲ್ಲಾ ಸಮಿತಿ ಮುಸ್ಲಿಂ ಒಕ್ಕೂಟ, ಕರ್ನಾಟಕ ರಾಷ್ಟ್ರ ಸಮಿತಿ, ಭಾರತೀಯ ಕ್ರಿಶ್ಚಿಯನ್ ಒಕ್ಕೂಟ ಅಂಬೇಡ್ಕರ್ ಯುವಸೇನೆ ಉಡುಪಿ ಸೇರಿದಂತೆ 14 ಸಂಘಟನೆಗಳು ಬೆಂಬಲ ನೀಡಲಿವೆ ಎಂಬುದಾಗಿ ಅವರು ತಿಳಿಸಿದರು. 

ಸರಕಾರದ ನೀತಿಗಳು ಜನಸಾಮಾನ್ಯರನ್ನು ಬಾಧಿಸುವುದರಿಂದ ಉಡುಪಿ ಜಿಲ್ಲೆಯ ರೈತರು, ಕಾರ್ಮಿಕರು, ವ್ಯಾಪಾರಿಗಳು, ಬಸ್‌ ಮಾಲಕರು ಮತ್ತು ನೌಕರರು ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿ, ಸರಕಾರಕ್ಕೆ ಎಚ್ಚರಿಕೆ ನೀಡಬೇಕು. ಸೆ.28ರಂದು ಬೆಳಗ್ಗೆ 6ಗಂಟೆಗೆ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಈ ಸಂಘಟನೆಗಳ ಪದಾಧಿಕಾರಿಗಳು ಸೇರಿ ನಗರದಾದ್ಯಂತ ಮೆರವಣಿಗೆಯ ಮೂಲಕ ತೆರಳಿ ಬಂದ್‌ ಬೆಂಬಲ ನೀಡುವಂತೆ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರನ್ನು ಕೋರಲಾಗುವುದು ಎಂದು
ಕಾಯಿದೆಗಳ ತಿದ್ದುಪಡಿ ಮಾಡುವ ಮೂಲಕ ಕೇಂದ್ರ ಸರಕಾರ ರೈತಾಪಿ ಕೃಷಿ ನಾಶ ಮಾಡಿ, ಕಂಪೆನಿ ಕೃಷಿಯನ್ನು ಜಾರಿಗೆ ತರಲು ಹೊರಟಿದೆ.

ಖಾಸಗೀಕರಣಗೊಳಿಸುವ ಉದ್ದೇಶದಿಂದ ವಿದ್ಯುತ್‌ ಕಾಯಿದೆ ಜಾರಿಗೆ ತರ ಲಾಗುತ್ತಿದೆ. ಇದು ಜಾರಿಯಾದರೆ ನೀರಾವರಿ ಪಂಪ್‌ಸೆಟ್‌ಗಳಿಗೂ ಮೀಟರ್‌ ಕಡ್ಡಾಯ ಮಾಡಲಾಗುತ್ತದೆ ಮತ್ತು ಉಚಿತ ವಿದ್ಯುತನ್ನು ನಿಲ್ಲಿಸಲಾಗುತ್ತದೆ. ಸರಕಾರದ ಈ ನೀತಿಗಳು ದೇಶದ ಕೃಷಿ, ಆಹಾರ ಭದ್ರತೆ, ಸ್ವಾವಲಂಬನೆಯನ್ನು ನಾಶ ಮಾಡುತ್ತವೆ ಮತ್ತು ಇದರಿಂದ ಬಹುಸಂಖ್ಯಾಕರು ಹಸಿವು, ಬಡತನ, ನಿರುದ್ಯೋಗವನ್ನು ಎದುರಿಸಬೇಕಾಗುತ್ತದೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಕಿಸಾನ್‌ ಘಟಕದ ಶಶಿಧರ್‌ ಶೆಟ್ಟಿ ಎರ್ಮಾಳ್‌, ಪ್ರಾಂತ ರೈತ ಸಂಘದ ಶಶಿಧರ್‌ ಗೊಲ್ಲ, ಕಾಂಗ್ರೆಸ್‌ ಮುಖಂಡ ಕುಶಲ್‌ ಶೆಟ್ಟಿ, ಜೆಡಿಎಸ್‌ನ ಯೋಗೀಶ್‌ ಶೆಟ್ಟಿ, ದಸಂಸ ಮುಖಂಡ ಸುಂದರ್‌ ಮಾಸ್ಟರ್‌, ವೆಲ್ಫೆರ್‌ ಪಾರ್ಟಿಯ ಅಬ್ದುಲ್‌ ಅಝೀಝ್, ಜಿಲ್ಲಾ ಮುಸ್ಲಿಮ್‌ ಒಕ್ಕೂಟದ ಯಾಸೀನ್‌ ಮಲ್ಪೆ, ಕರ್ನಾಟಕ ರಾಷ್ಟ್ರ ಸಮಿತಿಯ ವಿನುತ ಕಿರಣ್‌, ಸಿಐಟಿಯು ಕವಿರಾಜ್‌, ಕ್ರಿಶ್ಚಿಯನ್‌ ಒಕ್ಕೂಟದ ಪ್ರಶಾಂತ್‌ ಜತ್ತನ್ನ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!