ಅಕ್ಕಿ ನೀಡದ ಕೇಂದ್ರ ಸರ್ಕಾರದ ಕ್ರಮ ಸರಿಯಲ್ಲ- ಬಿಜೆಪಿ ಸಂಸದ ಬಚ್ಚೇಗೌಡ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಿಎನ್ ಬಚ್ಚೇಗೌಡ ಅವರು ಮಂಗಳವಾರ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಪ್ರಕಾರ ಪಕ್ಷದಲ್ಲಿ ಎಪ್ಪತ್ತು ವರ್ಷ ವಯಸ್ಸಿಗೆ ನಿವೃತ್ತಿಯಾಗಬೇಕು. ಈಗ ನನಗೆ ಎಂಬತ್ತೊಂದು ವರ್ಷ ವಯಸ್ಸಾಗಿದೆ. ಅರ್ಥಪೂರ್ಣ ಸಮಾರಂಭವನ್ನೂ ಆಚರಣೆ ಮಾಡಿಕೊಂಡಿದ್ದೇವೆ. ನನಗೆ ಪಕ್ಷದಲ್ಲಿ ಟಿಕೆಟ್ ಕೊಡುವುದಿಲ್ಲ ಅಂತ ಪ್ರಧಾನಿ ಮೋದಿ ಹೇಳಿಬಿಟ್ಟಿದ್ದಾರೆ. ಹೀಗಾಗಿ ನಿವೃತ್ತಿಯಾಗುತ್ತಿದ್ದೇನೆ ಎಂದು ಬಚ್ಚೇಗೌಡ ಅವರು ಹೇಳಿದ್ದಾರೆ.
ಮೋದಿ ಅವರು ಬಿಜೆಪಿಯಲ್ಲಿ ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂದು ಘೋಷಣೆ ಮಾಡಿದ್ದಾರೆ. ತಂದೆ, ಮಗ, ಮೊಮ್ಮಗ, ಮೊಮ್ಮಗಳು ರಾಜಕಾರಣಕ್ಕೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ. ಹಿಗಾಗಿ ನಿವೃತ್ತಿಯಾಗುತ್ತಿದ್ದೇನೆ ಎಂದು ಬಚ್ಚೇಗೌಡ ಅವರು ತಿಳಿಸಿದ್ದಾರೆ.
ಚುನಾವಣಾ ರಾಜಕೀಯದಲ್ಲಿ ಇರದಿದ್ದರೂ ರಾಜಕಾರಣದಲ್ಲಿ ಸಕ್ರಿಯವಾಗಿ ಕೆಲಸ ಮಾಡಿಕೊಂಡು ಇರುತ್ತೇನೆ ಎಂದು ಬಿಜೆಪಿ ಸಂಸದ ಹೇಳಿದ್ದಾರೆ.
ಕೇಂದ್ರದ ವಿರುದ್ಧ ವಾಗ್ದಾಳಿ
ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಚ್ಚೇಗೌಡ ಅವರು, ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ನೀಡದ ಕೇಂದ್ರ ಸರ್ಕಾರದ ಕ್ರಮ ಸರಿ ಇಲ್ಲ ಎಂದು ಸ್ವಪಕ್ಷದ ಸರ್ಕಾರದ ವಿರುದ್ಧವೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಹಣ ನೀಡುತ್ತೇವೆ ಎಂದರೂ ಅಕ್ಕಿ ನೀಡದಿರುವುದು ತಪ್ಪು. ನಾನು ರಾಜ್ಯದ ಸಂಸದನಾಗಿ ಹೇಳುತ್ತಿದ್ದೇನೆ. ಅಕ್ಕಿ ಕೊಡದಿರುವುದು ತಪ್ಪು. ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಅಕ್ಕಿ ಕೊಡದೆ ಅನ್ಯಾಯ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.