‘ಆಪರೇಷನ್ ಹಸ್ತ’ಕ್ಕೆ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್! ಕಾಂಗ್ರೆಸ್ ಸೇರಲು ನುಗ್ಗುತ್ತಿರುವ ಬಿಜೆಪಿ ನಾಯಕರು!
ಬೆಂಗಳೂರು: ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸುವ ಸಾಧ್ಯತೆಯಿದೆ. 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಆಪರೇಷನ್ ಹಸ್ತಕ್ಕೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ನೀಡಿದೆ. ಆಪರೇಷನ್ ಹಸ್ತ ಬಿಜೆಪಿ ಶಾಸಕರ ಬೆಂಬಲಿಗರು ಮತ್ತು 2ನೇ ಹಂತದ ನಾಯಕರಿಂದ ಪ್ರಾರಂಭವಾಗಿದೆ ಎಂಬುದು ಸ್ಪಷ್ಟ ಸೂಚನೆಯಾಗಿದೆ.
ಕೆಪಿಸಿಸಿ ಕಚೇರಿಯಲ್ಲಿ ನೂತನವಾಗಿ ನೇಮಕಗೊಂಡ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸದಸ್ಯ ಹಾಗೂ ರಾಜ್ಯಸಭಾ ಸಂಸದ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತ ಸಯ್ಯದ್ ನಸೀರ್ ಹುಸೇನ್ ಅವರ ಸಮ್ಮುಖದಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ ಭಾನುವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಮಾಡಿದ್ದರು, ಅದಾದ ನಂತರ ಸೋಮವಾರ ಸೋಮಶೇಖರ್ ಬೆಂಬಲಿಗರು ಕಾಂಗ್ರೆಸ್ ಸೇರಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ. ಸೋಮಶೇಖರ್ ಅವರನ್ನು ಕಾಂಗ್ರೆಸ್ ಕರೆತರುವ ಜವಾಬ್ದಾರಿಯನ್ನು ಡಿಕೆಶಿವಕುಮಾರ್ ನೆಲಮಂಗಲ ಶಾಸಕ ಶ್ರೀನಿವಾಸ್ ಅವರಿಗೆ ವಹಿಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಕೆಆರ್ ಪುರಂ ಶಾಸಕ ಬೈರತಿ ಬಸವರಾಜ್ ಬೆಂಬಲಿಗರು ಮತ್ತು ಮಾಜಿ ಕಾರ್ಪೊರೇಟರ್‌ಗಳು ಕಾಂಗ್ರೆಸ್ ಸೇರಿದ್ದಾರೆ. ಕಳೆದ ವಾರ, ಶಾಸಕ ಮುನಿರತ್ನ ಅವರ ಬೆಂಬಲಿಗರು ಸೇರಿದಂತೆ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕೆಲವು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರಿದ್ದರು. ಈ ನಡುವೆ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೋಮವಾರ ಶಿವಕುಮಾರ್ ಅವರನ್ನು ಭೇಟಿ ಮಾಡಿದರು. ಮೂಲಗಳ ಪ್ರಕಾರ ಅವರು ಕೂಡ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ.
ಬೆಂಗಳೂರು ಅಭಿವೃದ್ಧಿ ಸಚಿವರು ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಅಧಿಕಾರ ಚಲಾಯಿಸುತ್ತಿದ್ದು, ತಮ್ಮ ವಿರೋಧಿಗಳನ್ನು ತಣ್ಣಗಾಗಿಸಲು ಎಲ್ಲಾ ರೀತಿಯ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ಕುರಿತು ತನಿಖೆ ನಡೆಸಲು ನಿಯೋಜಿಸಲಾಗಿರುವ ನಾಲ್ಕು ವಿಶೇಷ ತನಿಖಾ ತಂಡಗಳು (ಎಸ್‌ಐಟಿ) ಒಂದು ತಿಂಗಳಲ್ಲಿ ವರದಿ ನೀಡುವ ಸಾಧ್ಯತೆ ಇದ್ದು, ಬಿಜೆಪಿಯ ಕೆಲವು ಶಾಸಕರ ಬೆಂಬಲಿಗರಿಗೆ ಸಂಕಷ್ಟ ಎದುರಾಗುವ ಸಾಧ್ಯೆತೆಯಿದೆ, ಹೀಗಾಗಿ ಅವರೆಲ್ಲರು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.