ಕಳೆದ 9 ವರ್ಷಗಳಲ್ಲಿ ಭಾರತದಲ್ಲಿ ಅಭೂತಪೂರ್ವ ಡಿಜಿಟಲ್ ರೂಪಾಂತರ: ಪ್ರಧಾನಿ ಮೋದಿ
ನವದೆಹಲಿ: ಭಾರತ ದೇಶದಲ್ಲಿ ಯಶಸ್ವಿಯಾಗುವ ಪರಿಹಾರಗಳು ಜಗತ್ತಿನ ಯಾವ ಕಡೆಗಳಲ್ಲಿಯೂ ಸಹ ಅನ್ವಯ ಮಾಡಬಹುದು, ಭಾರತ ದೇಶದ ಡಿಜಿಟಲ್ ಸಾರ್ವಜನಿಕ ಮೂಲಭೂತ ಸೌಕರ್ಯಗಳು ಉತ್ತಮವಾಗಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಅವರು ಬೆಂಗಳೂರಿನಲ್ಲಿಂದು ಜಿ20 ಡಿಜಿಟಲ್ ಆರ್ಥಿಕ ಸಚಿವರುಗಳ ಸಭೆಯನ್ನುದ್ದೇಶಿಸಿ ಮಾತನಾಡಿ, ಭಾರತದ ಡಿಜಿಟಲ್ ಸಾರ್ವಜನಿಕ ಮೂಲಭೂತ ಸೌಕರ್ಯಗಳು ಜಾಗತಿಕ ಸವಾಲುಗಳಿಗೆ ಅಳೆಯಬಹುದಾದ ಸುರಕ್ಷಿತ ಮತ್ತು ಅಂತರ್ಗತ ಪರಿಹಾರಗಳಾಗಿವೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಹಲವು ಉಪಕ್ರಮಗಳನ್ನು ಉಲ್ಲೇಖಿಸಿದ ಅವರು, ಕಳೆದ 9 ವರ್ಷಗಳಲ್ಲಿ ಭಾರತ ಅಭೂತಪೂರ್ವ ಡಿಜಿಟಲ್ ರೂಪಾಂತರವನ್ನು ಹೊಂದಿದೆ. 2015ರಲ್ಲಿ ಡಿಜಿಟಲ್ ಇಂಡಿಯಾ ಅಭಿಯಾನದ ಮೂಲಕ ಆರಂಭವಾಯಿತು. ಸಂಶೋಧನೆಯಲ್ಲಿ ನಾವು ಅಸಾಧಾರಣ ಪ್ರಗತಿ ಸಾಧಿಸಿದ್ದು, ಆಂತರಿಕ ಬೆಳವಣಿಗೆ ಬಗ್ಗೆ ತ್ವರಿತ ಜಾರಿ ಮತ್ತು ನಮ್ಮ ಉತ್ಸಾಹದಲ್ಲಿನ ಬದ್ಧತೆಯನ್ನು ತೋರಿಸುತ್ತದೆ ಎಂದಿದ್ದಾರೆ.
ಸರ್ಕಾರದ ಇಂತಹ ಕೆಲವು ಉಪಕ್ರಮಗಳನ್ನು ಉಲ್ಲೇಖಿಸಿದ ಅವರು, ಸರ್ಕಾರ ಭಾಷಿಣಿಯನ್ನು ನಿರ್ಮಾಣ ಮಾಡುತ್ತಿದ್ದು, ಇದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಧಾರಿತ ಭಾಷಾ ಅನುವಾದ ವೇದಿಕೆಯಾಗಿದೆ. ಇದು ಭಾರತದ ವೈವಿಧ್ಯಮಯ ಭಾಷೆಗಳ ಡಿಜಿಟಲ್ ಆಂತರಿಕ ಬೆಳವಣಿಗೆಗಳಿಗೆ ಒತ್ತು ನೀಡುತ್ತದೆ ಎಂದಿದ್ದಾರೆ.
ಕೇಂದ್ರ ಸರ್ಕಾರ ಒಂದು ಆನ್ ಲೈನ್ ಜಾಗತಿಕ ಸಾರ್ವಜನಿಕ ಡಿಜಿಟಲ್ ಗೂಡ್ಸ್ ಡೆಪಾಸಿಟರಿ ಇಂಡಿಯಾ ಸ್ಟಾಕ್ಸ್ ನ್ನು ರಚಿಸಿದ್ದು ಎಲ್ಲರನ್ನೂ ಒಳಗೊಂಡ ಬೆಳವಣಿಗೆಯೇ ಇದರ ಮೂಲ ಉದ್ದೇಶವಾಗಿದೆ ಎಂದರು.
ಭಾರತದ ಡಿಜಿಟಲ್ ರೂಪಾಂತರ ಬಗ್ಗೆ ಮಾತನಾಡಿದ ಅವರು, ಭಾರತದಲ್ಲಿ ಇಂದು 850 ಮಿಲಿಯನ್ ಇಂಟರ್ನೆಟ್ ಬಳಕೆದಾರರಿದ್ದು ಜಗತ್ತಿನಲ್ಲಿಯೇ ಕೆಲವು ಅಗ್ಗದ ಡಾಟಾ ವೆಚ್ಚವನ್ನು ಹೊಂದಿದೆ. ಸರ್ಕಾರದ ಆಡಳಿತವನ್ನು ಜನರಿಗೆ ತ್ವರಿತವಾಗಿ ತಲುಪಿಸಲು ನಮ್ಮಲ್ಲಿ ಕೆಲವು ಪ್ರಮುಖ ತಂತ್ರಜ್ಞಾನಗಳಿವೆ. ಅವು ಹೆಚ್ಚು ದಕ್ಷವಾಗಿದ್ದು, ಎಲ್ಲರನ್ನೂ ಒಳಗೊಂಡ, ಅತಿ ತ್ವರಿತ ಮತ್ತು ದಕ್ಷವಾದ ತಂತ್ರಜ್ಞಾನವಾಗಿದೆ ಎಂದರು.
ಜಗತ್ತಿನಲ್ಲಿ ನಿಖರ ಸಮಯದ ಹಣ ಪಾವತಿಗಳು ಭಾರತದಲ್ಲಿ ಸಾಗುತ್ತಿದ್ದು, ಶೇಕಡಾ 45ರಷ್ಟು ರಿಯಲ್ ಟೈಮ್ ಪೇಮೆಂಟ್ ಭಾರತದಲ್ಲಿ ಆಗುತ್ತಿದೆ. 10 ಬಿಲಿಯನ್ ಗಿಂತಲೂ ಅಧಿಕ ವಹಿವಾಟುಗಳು ಯುಪಿಐ ಮೂಲಕ ಪ್ರತಿ ತಿಂಗಳು ನಡೆಯುತ್ತದೆ.COWIN ಪೋರ್ಟಲ್ ಭಾರತದ ವ್ಯಾಕ್ಸಿನೇಷನ್ ಅಭಿಯಾನವನ್ನು ಬೆಂಬಲಿಸಿದೆ ಎಂದು ಪಿಎಂ ನರೇಂದ್ರ ಮೋದಿ ಜಿ 20 ಡಿಜಿಟಲ್ ಆರ್ಥಿಕ ಮಂತ್ರಿಗಳ ಸಭೆಯಲ್ಲಿ ತಮ್ಮ ವರ್ಚುವಲ್ ಭಾಷಣದಲ್ಲಿ ಹೇಳಿದರು.