ಗಂಟೆ, ಚಪ್ಪಾಳೆ ಹೊಡೆಯಿರಿ ಗಿಮಿಕ್ಸ್‌ ನಿಂದ ದೇಶದಲ್ಲಿ ಕೊರೊನಾ ಎರಡನೇ ಸ್ಥಾನಕ್ಕೆ: ಸೊರಕೆ

ಉದ್ಯಾವರ(ಉಡುಪಿ ಟೈಮ್ಸ್ ವರದಿ): ಅವೈಜ್ಞಾನಿಕ ಲಾಕ್‌ಡೌನ್‌ನಿಂದ ಕೋವಿಡ್-19 ಸಾಂಕ್ರಮಿಕ ರೋಗ ನಿಯಂತ್ರಣವಾಗದೇ ವಲಸೆ ಕಾರ್ಮಿಕರ ಮಾರಣಹೋಮಕ್ಕೆ ಕಾರಣವಾಯಿತು.

ಇದು ಸಾಂಕ್ರಮಿಕ ರೋಗವನ್ನು ಗಂಬೀರವಾಗಿ ಪರಿಗಣಿಸದೆ  ಅದನ್ನು ತಮ್ಮ ರಾಜಕೀಯ ನಡೆ ಎಂಬುದಾಗಿ ಪರಿಗಣಿಸಿದ ಕೇಂದ್ರ ಸರಕಾರ ಗಂಟೆ ಬಡಿಯಿರಿ, ಚಪ್ಪಾಳೆ ಹೊಡೆಯಿರಿ, ದೀಪ ಹತ್ತಿಸಿ ಕೊರೊನಾ ಓಡಿಸಿ ಎಂದು ಗಿಮಿಕ್ಸ್‌ಗಳಿಗೆ ಒತ್ತಾಸೆ ಕೊಟ್ಟಿದ್ದರಿಂದ ಇಂದು ಈ ರೋಗ ಹರಡುವಿಕೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನಕ್ಕೆ ದೇಶ ಬರುವಂತಾಯಿತು ಎಂದು  ಈ ರೋಗ ನಿಯಂತ್ರಣ ಇನ್ನೊಂದು ಅಕ್ರಮ ದಂಧೆಗಳಿಗೆ ದಾರಿ ಮಾಡಿ ಕೊಟ್ಟಿತು ಎಂದು ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆಯವರು ನುಡಿದರು.

ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ದುರಿತ ಕಾಲದಲ್ಲಿ ಜನರ ಬದುಕಿಗೆ ಸಹಾಯವಾದುದು ಕಾಂಗ್ರೆಸ್ ಸರಕಾರ ಜಾರಿಗೆ ತಂದ ಆಹಾರ ಭದ್ರತೆ ಕಾನೂನು, ನರೇಗಾ ಕಾನೂನು ಮತ್ತು ಕಾಂಗ್ರೆಸ್ ಕಾಲದಲ್ಲಿ ನೇಮಕವಾದ ಆಶಾ ಕಾರ್ಯಕರ್ತರು ಎಂಬುದನ್ನು ವಿರೋಧ ಪಕ್ಷಗಳು ಮರೆಯಬಾರದು ಹಾಗು ಈ ಲಾಕ್‌ಡೌನ್ ಸಂದರ್ಭದಲ್ಲಿ ಮರಳು ದಂಧೆ, ಅಕ್ರಮ ಮರ ಸಾಗಾಟ ಮತ್ತು ಸರಕಾರದ ಸಿಮೆಂಟ್ ಬಳಸಿ ಸ್ವಂತ ಕಟ್ಟಡ ರಚನೆಯಂತ ಅಕ್ರಮಗಳಲ್ಲಿ ಬಿಜೆಪಿಯ ಮುಖಂಡರು ನಿರತರಾಗಿದ್ದದು ನಾಚಿಕೆಗೇಡಿನ ಸಂಗತಿ.

ಕೊರೊನಾ ಮಹಾಮಾರಿಯೊಂದಿಗೆ ಈಗ ನೆರೆಯ ಹಾವಳಿ ಜನರ ಬದುಕನ್ನು ದುಸ್ತರ ಗೊಳಿಸಿದೆ. ಈ ನೆರೆ ಪರಿಹಾರವನ್ನು ಶೀಘ್ರದಲ್ಲಿ ಫಲಾನುಭವಿಗಳಿಗೆ ವಿತರಿಸಬೇಕು ಇಲ್ಲವಾದರೆ ಸರಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ಬೀದಿಗಿಳಿದು ಹೋರಾಟ ಮಾಡಬೇಕಾದೀತು ಎಂದು ಸರಕಾರವನ್ನು ಎಚ್ಚರಿಸಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಪು ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ವೀಕ್ಷಕರಾದ ನೀರೆ ಕೃಷ್ಣ ಶೆಟ್ಟಿಯವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರದ ಮೂಲ ಕೇಂದ್ರ ಪಂಚಾಯತ್, ಇದು ಸರಕಾರವನ್ನು ಕಟ್ಟುವ ಕೆಲಸವನ್ನು ಮಾಡುತ್ತದೆ. ಹಾಗಾಗಿ ಗ್ರಾಮ ಪಂಚಾಯತ್ ಚುನಾವಣೆ ಎಲ್ಲಾ ಚುನಾವಣೆಗಳಿಗಿಂತ ಭಿನ್ನ ಮತ್ತು ಮಹತ್ತರವಾದುದು. ಹಾಗಾಗಿ ಕಾರ್ಯಕರ್ತರು ಇಂದಿನಿಂದಲೇ ಪಂಚಾಯತ್ ಚುನಾವಣೆಗೆ ಸಜ್ಜಾಗಬೇಕು ಎಂದು  ನುಡಿದರು.


 ವೇದಿಕೆಯಲ್ಲಿ ಕಾಪು ಉತ್ತರ ವಲಯ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ  ಚರಣ್ ವಿಠಲ್, ಇಂಟಕ್ ಅಧ್ಯಕ್ಷರಾದ ಉಮೇಶ್ ಕಾಂಚನ್, ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಗಂಧಿ ಶೇಖರ್, ಮಾಜಿ ಉಪಾಧ್ಯಕ್ಷರಾದ ರಿಯಾಝ್ ಪಳ್ಳಿ ಉಪಸ್ಥಿತರಿದ್ದರು.


 ಪ್ರಾರಂಭದಲ್ಲಿ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಗಿರೀಶ್ ಕುಮಾರ್ ಎಲ್ಲರನ್ನು ಸ್ವಾಗತಿಸಿದರು. ಮಾಜಿ ಅಧ್ಯಕ್ಷರಾದ  ಉದ್ಯಾವರ ನಾಗೇಶ್ ಕುಮಾರ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳನ್ನು ಸಭೆಗೆ ಪರಿಚಯಿಸಿದರು. ಕಾರ್ಯದರ್ಶಿ ಆಬಿದ್ ಆಲಿಯವರು ಕಾರ್ಯಕ್ರಮವನ್ನು ನಿರ್ವಹಿಸಿ, ವಂದನೆ ಸಲ್ಲಿಸಿದರು.


ಪ್ರಾರಂಭದಲ್ಲಿ ಅಗಲಿದ ಮಹಾನ್ ಹಿನ್ನಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ರವರ ಆತ್ಮಕ್ಕೆ ಚಿರ ಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಭೆಯಲ್ಲಿ ಕೆಪಿಸಿಸಿ ಆರೋಗ್ಯ ಹಸ್ತ ಸ್ವಯಂ ಸೇವಕರಿಗೆ ಕಿಟ್ ಅನ್ನು ವಿತರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!