ಮನೆ-ಮನೆಗೂ ಗ್ಯಾರಂಟಿ ಯೋಜನೆಗಳ ತಲುಪಿಸಿ: ಕಾಂಗ್ರೆಸ್ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯತ್ತ ಗಮನಹರಿಸಿ, ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಮನೆ-ಮನೆಗೂ ತಲುಪಿಸಬೇಕು ಎಂದು ಕಾಂಗ್ರೆಸ್ ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.
ಎಲ್ಲಾ ಜಿಲ್ಲೆಗಳನ್ನು ಒಳಗೊಂಡಂತೆ 31 ಸರಣಿ ಸಭೆಗಳನ್ನು ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 50 ಗಂಟೆಗಳ ಕಾಲ ಕಾಂಗ್ರೆಸ್ ಶಾಸಕರ ಸಮಸ್ಯೆಗಳನ್ನು ಆಲಿಸಿದರು. 5 ದಿನಗಳ ಕಾಲ ನಡೆದ ಸರಣಿ ಸಭೆಯಲ್ಲಿ ಶಾಸಕರು ಹಾಗೂ ಸಂಸದರು ಭಾಗವಹಿಸಿದ್ದರು.
ಸಭೆಯಲ್ಲಿ ಶಾಸಕರು ಮುಖ್ಯಮಂತ್ರಿಗಳಿಗೆ ಹಲವು ಸಲಹೆಗಳನ್ನು ನೀಡಿದರು. ಹಲವು ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಕೈಗೆತ್ತಿಕೊಳ್ಳುವಂತೆ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮುಂದಿಟ್ಟರು. ಈ ವೇಳೆ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಲೋಕಸಭಾ ಚನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆದ್ಯತೆ ಮತ್ತು ಲಭ್ಯತೆಯ ಆಧಾರದ ಮೇಲೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಮತ್ತು ಕುಂದುಕೊರತೆಗಳನ್ನು ಪರಿಹರಿಸಿ. ನಿಗದಿತ ಸಮಯಕ್ಕೆ ಅನುಗುಣವಾಗಿ ಕಾಮಗಾರಿಗಳ ಕೈಗೊಳ್ಳುವಂತೆ ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಭಿಪ್ರಾಯಗಳನ್ನು ತೆಗೆದುಕೊಳ್ಳಲಾಯಿತು. ಈ ಸಭೆಗಳಲ್ಲಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಶಿವಕುಮಾರ್ ತಮ್ಮ ಸಲಹೆಗಳನ್ನು ನೀಡುತ್ತಲೇ ಇದ್ದರು. ಐದು ಭರವಸೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಆದ್ಯತೆ ನೀಡಲಾಗಿದ್ದು, ಮಧ್ಯಮ ವರ್ಗ ಮತ್ತು ಬಡ ವರ್ಗದವರ ಮನೆ ಬಾಗಿಲಿಗೆ ಕೊಂಡೊಯ್ಯಬೇಕು. ಚುನಾವಣೆಗೆ ಆದ್ಯತೆ ನೀಡಲಾಗಿದ್ದು, ಮುಂಬರುವ ಬಿಬಿಎಂಪಿ ಮತ್ತು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಉತ್ತಮ ಜಯ ತಂದುಕೊಡುವಂತೆ ಶಾಸಕರು ಭರವಸೆ ನೀಡಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬ ಸಚಿವರು ತಮ್ಮ ತಮ್ಮ ಜಿಲ್ಲೆಗಳಲ್ಲಿರುವ ಪಕ್ಷದ ಕಚೇರಿಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಕಾರ್ಯಕರ್ತರ ಕುಂದುಕೊರತೆಗಳನ್ನು ಆಲಿಸಬೇಕು ಎಂದು ಸೂಚನೆ ನೀಡದರು. ಮುಖ್ಯಮಂತ್ರಿಗಳ ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡವು ಜಿಲ್ಲಾವಾರು ಪ್ರತ್ಯೇಕ ಬೇಡಿಕೆಗಳು ಮತ್ತು ಪ್ರಗತಿ ಪಟ್ಟಿಗಳನ್ನು ಸಿದ್ಧಪಡಿಸಿ ಸಂಬಂಧಪಟ್ಟ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಸಲ್ಲಿಸಲಿದೆ.
ಈ ನಡುವೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಹಗರಣಗಳ ಪಟ್ಟಿಯನ್ನು ತಂಡವೊಂದು ಸಿದ್ಧಪಡಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.