₹ 7.40 ಕೋಟಿ ಲಂಚ ಆರೋಪ: ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ದೂರು
ಬೆಂಗಳೂರು: ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬಹುಮಹಡಿ ಸಮುಚ್ಚಯ ನಿರ್ಮಾಣ ಕಂಪನಿಯಿಂದ ₹ 7.40 ಕೋಟಿ ಲಂಚ ಪಡೆದಿರುವ ಆರೋಪದಡಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಶಶಿಧರ್ ಮರಡಿ ಸೇರಿದಂತೆ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದು ಒತ್ತಾಯಿಸಿ ಜನಾಧಿಕಾರ ಸಂಘರ್ಷ ಪರಿಷತ್ ಸದಸ್ಯರು, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಶುಕ್ರವಾರ ದೂರು ನೀಡಿದ್ದಾರೆ.
‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರರೂ ಆಗಿರುವ ವಿಜಯೇಂದ್ರ ಮತ್ತು ಇತರರು, ಅಪರಾಧ ಸಂಚಿನಿಂದ ಕೃತ್ಯ ಎಸಗಿದ್ದಾರೆ’ ಎಂದೂ ದೂರಿನಲ್ಲಿ ಸದಸ್ಯರು ತಿಳಿಸಿದ್ದಾರೆ. ಇದೇ ದೂರನ್ನು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಹಾಗೂ ಶೇಷಾದ್ರಿಪುರ ಠಾಣೆ ಇನ್ಸ್ಪೆಕ್ಟರ್ ಅವರಿಗೂ ನೀಡಲಾಗಿದೆ.
‘₹ 17 ಕೋಟಿ ಲಂಚ ನೀಡುವಂತೆ ವಸತಿ ಸಮುಚ್ಚಯ ನಿರ್ಮಾಣದ ರಾಮಲಿಂಗಂ ಕನ್ಟ್ರಕ್ಷನ್ಸ್ ಕಂಪನಿಗೆ ಬೇಡಿಕೆ ಇರಿಸಲಾಗಿತ್ತು. ನಂತರ, ನಗದು ಮತ್ತು ಆರ್ಟಿಜಿಎಸ್ ಮೂಲಕ ₹ 7.40 ಕೋಟಿ ಹಣವನ್ನು ಆರೋಪಿಗಳು ಸುಲಿಗೆ ಮಾಡಿದ್ದಾರೆ. ಅಧಿಕಾರಿಯೊಬ್ಬರು ಮುಖ್ಯಮಂತ್ರಿ ಹೆಸರು ಹೇಳಿಕೊಂಡು ಲಂಚದ ರೂಪದಲ್ಲಿ ಹಣ ಪಡೆದಿದ್ದಾರೆ. ಅದು ಗೊತ್ತಿದ್ದರೂ ಆ ಅಧಿಕಾರಿ ಮೇಲೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಪ್ರಕರಣದಲ್ಲಿ ಬಿ.ವೈ. ವಿಜಯೇಂದ್ರ ಅವರು ಭಾಗಿಯಾಗಿರುವ ಅನುಮಾನವಿದೆ.’
‘ಪ್ರಕರಣಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ರಾಮಲಿಂಗಂ ಕನ್ಟ್ರಕ್ಷನ್ಸ್ ಮುಖ್ಯಸ್ಥರಾಗಿರುವ ರಾಕೇಶ್ ಶೆಟ್ಟಿ ಅವರೇ ಬಯಲು ಮಾಡಿದ್ದಾರೆ. ಅವರನ್ನೂ ಪ್ರಕರಣದಲ್ಲಿ ಸಾಕ್ಷಿಯಾಗಿ ಪರಿಗಣಿಸಿಕೊಳ್ಳಬೇಕು. ಆರೋಪಿಗಳ ವಿರುದ್ಧ ಸಮಾನ ಉದ್ದೇಶದೊಂದಿಗೆ ಹಲವು ವ್ಯಕ್ತಿಗಳಿಂದ ಆದ ಅಪರಾಧ ಸಂಚು (ಐಪಿಸಿ 34), ಸುಲಿಗೆ (ಐಪಿಸಿ 384) ಹಾಗೂ ಕ್ರಿಮಿನಲ್ ಪಿತೂರಿ (ಐಪಿಸಿ 120 ಬಿ) ಆರೋಪದಡಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.