ಗೋ ಹತ್ಯೆ, ಮತಾಂತರ ನಿಷೇಧ ಕಾಯ್ದೆ ಹಿಂಪಡೆಯದಂತೆ ಸರ್ಕಾರಕ್ಕೆ ವಿವಿಧ ಮಠಾಧೀಶರು ಒತ್ತಾಯ
ಬೆಂಗಳೂರು: ‘ರಾಜ್ಯದ ಜನರು ಶಾಂತಿ, ಸಾಮರಸ್ಯ ಹಾಗೂ ಸೌಹಾರ್ದತೆಯಿಂದ ಬದುಕಬೇಕಾದರೆ ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ 2022’ ಮತ್ತು ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು (ಮತಾಂತರ ನಿಷೇಧ) ಕಾಯ್ದೆ’ಯನ್ನು ಹಿಂಪಡೆಯಬಾರದು ಎಂದು ಮಠಾಧೀಶರು ಒತ್ತಾಯಿಸಿದ್ದಾರೆ.
ಈ ಎರಡೂ ಕಾನೂನುಗಳನ್ನು ಯಥಾಸ್ಥಿತಿಯಲ್ಲಿ ಅನುಷ್ಠಾನಗೊಳಿಸುವಂತೆ ಮತ್ತು ಅವುಗಳನ್ನು ದುರ್ಬಲಗೊಳಿಸದಂತೆ ನೋಡಿಕೊಳ್ಳಬೇಕು. ಸರ್ಕಾರ ಈ ಕಾಯ್ದೆಗಳನ್ನು ಯಾವುದೇ ಕಾರಣಕ್ಕೂ ಹಿಂಪಡೆಯಬಾರದು ಎಂದು ಆಗ್ರಹಿಸಿ ಸಂತ ಸಮ್ಮೇಳನದಲ್ಲಿ ಒಕ್ಕೂರಲ ನಿರ್ಣಯವನ್ನು ಕೈಗೊಳ್ಳಲಾಯಿತು.
ಇಲ್ಲಿನ ಮಲ್ಲೇಶ್ವರಂನಲ್ಲಿರುವ ಯದುಗಿರಿ ಯತಿರಾಜ ಮಠದಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಸಂತ ಸಮ್ಮೇಳನದಲ್ಲಿ ವಿವಿಧ ಮಠಾಧೀಶರು ಪಾಲ್ಗೊಂಡು, ರಾಜ್ಯದಲ್ಲಿನ ಧರ್ಮಕ್ಕೆ ಸಂಬಂಧಿಸಿದ ವಿವಿಧ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದರು ಎಂದು ವಿಎಚ್‌ಪಿ ತಿಳಿಸಿದೆ.
ಗೋಹತ್ಯೆ, ಧಾರ್ಮಿಕ ಮತಾಂತರ, ಲವ್ ಜಿಹಾದ್, ಹಿಂದೂ ಅವಿಭಜಿತ ಕುಟುಂಬ, ಪರಿಸರ, ಸಾಮರಸ್ಯ ಸೇರಿದಂತೆ ಇತರ ವಿಷಯಗಳ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಯಿತು. ಈ ವೇಳೆ ಎರಡು ನಿರ್ಣಯಗಳನ್ನು ಸರ್ವಾನುಮತದಿಂದ ಅಂಗೀಕರಿಸಿತು ಎಂದು ಅದು ಹೇಳಿದೆ.
ಯದುಗಿರಿ ಯತಿರಾಜ ಮಠದ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ, ರಾಮಕೃಷ್ಣ ಮಿಷನ್‌ನ ಚಂದ್ರೇಶಾನಂದ ಜಿ, ಮಹಾಲಿಂಗೇಶ್ವರ ಮಠದ ರವಿಶಂಕರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಸುಮಾರು 14 ಸಾಧಕರು ನಿರ್ಣಯಕ್ಕೆ ಸಹಿ ಹಾಕಿದ್ದಾರೆ. ರಾಜ್ಯದಲ್ಲಿ 2023ರ ವಿಧಾನಸಭಾ ಚುನಾವಣೆಗೆ ಮುನ್ನ ಮತ್ತು ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದ ಈ ಎರಡೂ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಹೇಳಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಗೊಳಿಸಲು ಈಗಾಗಲೇ ನಿರ್ಧರಿಸಿದ್ದರೆ, ಗೋಹತ್ಯೆ ವಿರೋಧಿ ಕಾನೂನನ್ನು ರದ್ದುಗೊಳಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಇತ್ತೀಚೆಗೆ ಸ್ಪಷ್ಟಪಡಿಸಿದೆ.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ, ‘ಧರ್ಮ ಪರಿವರ್ತನೆ ಹಾಗೂ ಗೋಹತ್ಯೆ ನಿಲ್ಲಬೇಕು. ಇದು ಸನಾತನ ಧರ್ಮ ಅಥವಾ ಹಿಂದೂ ಧರ್ಮಕ್ಕೆ ಉತ್ತೇಜನ ನೀಡುತ್ತದೆ. ನಮ್ಮ ಧರ್ಮವು ಭಾರತದಲ್ಲಿ ಎಲ್ಲಾ ಧರ್ಮದ ಜನರು ಶಾಂತಿಯುತವಾಗಿ ಸಹಬಾಳ್ವೆ ನಡೆಸಬೇಕೆಂದು ನಂಬುತ್ತದೆ. ಹೀಗಾಗಿ ಸರ್ಕಾರವನ್ನು ಒತ್ತಾಯಿಸಲು ನಾವೆಲ್ಲರೂ ಇಲ್ಲಿ ಜಮಾಯಿಸಿದ್ದೇವೆ ಎಂದು ಹೇಳಿದರು.
ಈಗಿನ ಕಾಂಗ್ರೆಸ್ ಸರ್ಕಾರ ಕಾಯ್ದೆಗಳನ್ನು ಹಿಂಪಡೆಯಲು ಬಯಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ, ಈ ಬಗ್ಗೆ ಅಂಗೀಕರಿಸಿದ ನಿರ್ಣಯಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಇಲ್ಲಿ ಪಕ್ಷ ಮುಖ್ಯವಲ್ಲ, ಸಮಸ್ಯೆ ಮುಖ್ಯವಾಗಿದೆ. ವಿಷಯ ಎಲ್ಲರಿಗೂ ಸಂಬಂಧಿಸಿದೆ. ನಾನು ರಾಜಕೀಯದ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಈ ಕಾಯ್ದೆಗಳು ರಾಷ್ಟ್ರಮಟ್ಟದಲ್ಲಿಯೂ ಇರಬೇಕು ಎಂಬ ನಿರೀಕ್ಷೆ ನಮ್ಮದು ಎಂದು ಹೇಳಿದರು.