ರಾಹುಲ್ ಗಾಂಧಿ ATM ಕಾಂಗ್ರೆಸ್ ಸರ್ಕಾರದ ಮುಲಾಜಿನಲ್ಲಿದ್ದಾರೆ: ಬೊಮ್ಮಾಯಿ ಆರೋಪ

ರಾಜ್ಯ ಸರ್ಕಾರದ ಭ್ರಷ್ಟಾಚಾರಗಳ ವಿರುದ್ದ ಕಾನೂನಾತ್ಮಕ ಹೋರಾಟ: ಬಸವರಾಜ ಬೊಮ್ಮಾಯಿ

ಬೆಂಗಳೂರು: ಕಾಂಗ್ರೆಸ್ ‌ನಾಯಕ ರಾಹುಲ್ ಗಾಂಧಿ ಕರ್ನಾಟಕದ ಎಟಿಎಂ ಸರ್ಕಾರದ ಮುಲಾಜಿನಲ್ಲಿದ್ದಾರೆ ಹೀಗಾಗಿ ಅವರು ಗುತ್ತಿಗೆದಾರರಿಗೆ ಬಿಲ್ ಕೊಡಿಸಲು ಮಧ್ಯ ಪ್ರವೇಶ ಮಾಡುವುದಿಲ್ಲ. ರಾಜ್ಯ ಸರ್ಕಾರದ ಭ್ರಷ್ಟಾಚಾರಗಳ ವಿರುದ್ದ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತ‌ನಾಡಿದ ಅವರು, ಡಿಸಿಎಂ ಡಿಕೆ ಶಿವಕುಮಾರ್ ಅವರು ವಿಷಯ ಡೈವರ್ಟ್ ಮಾಡುತ್ತಿದ್ದಾರೆ. ನಮ್ಮ ಕಾಲದಲ್ಲಿ ಬಿಡುಗಡೆಯಾಗುರುವ 650 ಕೋಟಿ ಯಾಕೆ ಇಟ್ಟುಕೊಂಡಿದ್ದಾರೆ. ತನಿಖೆ ಮಾಡುತ್ತೇವೆ ಅಂತ ಹೇಳಿ ಹಣ ಇಟ್ಟು ಕೊಂಡಿದ್ದಾರೆ. ಇದು ಅನುಮಾನಕ್ಕೆ ಕಾರಣವಾಗಿದೆ ಎಂದರು.

ಕಾಂಟ್ರಾಕ್ಟರ್ ಕಡೆಯವರೇ ಆಣೆ ಪ್ರಮಾಣ ಮಾಡುವಂತೆ ಹೇಳಿದ್ದಾರೆ‌. ಅದನ್ನು ವಿಷಯಾಂತರ ಮಾಡುವ ಬದಲು, ಸರ್ಕಾರ ಗುತ್ತಿಗೆದಾರರ ಹಣ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಸಚಿವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ. ನಿನ್ನೆ ಶಾಂಗ್ರಿಲಾದಲ್ಲಿ ಕಮಿಷನ್ ಮಾತುಕತೆ ನಡೆಯುತ್ತಿದೆ ಅಂತ ಹೇಳಿದ್ದರು. ಅವರ ಮೇಲೆ ಏನು ಒತ್ತಡ ಇದೆಯೋ ಗೊತ್ತಿಲ್ಲ. ಈಗ ಯಾರೂ ಕಮಿಷನ್ ಕೇಳಿಲ್ಲ ಅಂತ ಹೇಳುತ್ತಿದ್ದಾರೆ ಎಂದರು. ನಾವು ಮಾರ್ಚ್ ನಲ್ಲಿ ಹಣ ಬಿಡುಗಡೆ ಮಾಡಿದ್ದೇವೆ. ನಾವೇನು ಸುಳ್ಳು ಹೇಳಬೇಕಿಲ್ಲ. ಅವರು ಹಣ ಬಿಡುಗಡೆ ಮಾಡದ ಕಾರಣ ಈಗ ಕಾಂಟ್ರಾಕ್ಟ್ ರ್ಸ್ ಸಿಎಂ, ಡಿಸಿಎಂ, ರಾಜ್ಯಪಾಲರ ಬಳಿ ಓಡಾಡುತ್ತಿದ್ದಾರೆ. ಈಗ ಬಿಬಿಎಂಪಿಯಲ್ಲಿ ತೆರಿಗೆ ಸಂಗ್ರಹ ಮಾಡಿದ್ದಾರೆ. ಅದರಲ್ಲಿ ಗುತ್ತಿಗೆದಾರರ ಹಣ ಕೊಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಇಲ್ಲಿ ಮಧ್ಯ ಪ್ರವೇಶಿಸಲು ಮನಸಿಲ್ಲ‌. ಎಟಿಎಂ ಅಂತ ಏನು ಹೆಸರಿದೆಯೋ ಅದು ಸತ್ಯವಾಗಿರುವುದರಿಂದ ಅವರು ರಾಜ್ಯ ಸರ್ಕಾರದ ಮುಲಾಜಿನಲ್ಲಿದ್ದಾರೆ. ಹೀಗಾಗಿ ಅವರು ಇಲ್ಲಿ ಮದ್ಯಪ್ರವೇಶ ಮಾಡಲು ಬರುತ್ತಿಲ್ಲ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ಜನರಿಗೆ ಬೇಕಾಗಿರುವ ಕಾಮಗಾರಿ ಮಾಡದಿದ್ದರೆ ಬ್ರ್ಯಾಂಡ್ ಬೆಂಗಳೂರು ಯೋಜನೆ ಯಶಸ್ವಿಯಾಗುವುದಿಲ್ಲ. ನಮ್ಮ ಅವಧಿಗೂ ಹಿಂದಿನಿಂದಲೂ ಬಾಕಿ ಉಳಿದಿದೆ‌. ನಾವು ಹಿರಿತನದ ಆಧಾರದಲ್ಲಿ ಬಿಲ್ ಪಾವತಿ ಮಾಡಲು ನಿಯಮ ಮಾಡಿದ್ದರಿಂದ ವ್ಯವಸ್ಥಿತವಾಗಿ ಹಣ ಬಿಡುಗಡೆಯಾಗುತ್ತಿತ್ತು. ಈ ಸರ್ಕಾರ ಇಲ್ಲದ ಸಬೂಬು ಹೇಳದೇ ಗುತ್ತಿಗೆದಾರರ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ, ರಾಜ್ಯ ಸರ್ಕಾರದ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!