ನನ್ನ ಮೇಲಿನ ಕಮಿಷನ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ: ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ತನ್ನ ವಿರುದ್ಧದ  ಕಮಿಷನ್ ಆರೋಪ ಸಾಬೀತಾದರೆ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರು ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸವಾಲ್ ಹಾಕಿದ್ದಾರೆ.

ನಗರದ ತಮ್ಮ ನಿವಾಸದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವಧಿಯಲ್ಲಿನ ಕಾಮಗಾರಿಗಳ ಕುರಿತು ತನಿಖೆ ನಡೆಸುವಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ವಿಧಾನಸಭೆ ಮನವಿ ಮಾಡಿದ್ದರು. ಅದರಂತೆ ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದಲ್ಲಿನ ಸಮಿತಿಯು ಈ ಎಲ್ಲಾ ಹಗರಣಗಳ ಕುರಿತು ತನಿಖೆ ನಡೆಸುತ್ತಿದೆ. ತನಿಖೆ ಪೂರ್ಣಗೊಂಡು ವರದಿ ಬಂದ ನಂತರ ಬಾಕಿಯಿರುವ ಬಿಲ್ ಹಣ ಬಿಡುಗಡೆ ಮಾಡಲಾಗುವುದು ಎಂದರು.

ಇದೇ ವಿಚಾರವಾಗಿ ಬಿಜೆಪಿ ನಾಯಕರಾದ ಬಸವರಾಜ ಬೊಮ್ಮಾಯಿ ಹಾಗೂ ಆರ್. ಅಶೋಕ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಡಿಕೆ ಶಿವಕುಮಾರ್,  ಈ ಹಿಂದೆ ಬಿಜೆಪಿಯವರು ಕೆಲಸ ಮಾಡಿದವರಿಗೆ ಯಾಕೆ ಬಿಲ್ ಪಾವತಿ ಮಾಡಲಿಲ್ಲ? ಎಂದು ಅವರ ಬಳಿ ಹಣ ಇರಲಿಲ್ಲವೇ? ಎಂದು ಪ್ರಶ್ನಿಸಿದರು. ನಾಲ್ಕೈದು ವರ್ಷ ಕಾಯ್ದಿದ್ದು, ಈಗ ಯಾಕೆ ಇಷ್ಟು ಅರ್ಜೆಂಟ್ ಮಾಡ್ತಿದ್ದೀರಾ? ಸರ್ಕಾರ ಕೂಲಂಕುಷವಾಗಿ ಎಲ್ಲಾ ಪರಿಶೀಲಿಸಬೇಕಾಗಿದ್ದು ಸಮಯಾವಕಾಶದ ಅಗತ್ಯವಿದೆ ಎಂದು ಅವರು ತಿಳಿಸಿದರು.

ಶೇ.10 ರಿಂದ 15 ರಷ್ಟು ಕಮೀಷನ್ ಯಾರು ಕೇಳಿದ್ರು, ಮುಖ್ಯಮಂತ್ರಿನಾ, ಅಥವಾ ನಾನಾ, ಸಚಿವರಾ, ಅಧಿಕಾರಿಯಾ ಎಂಬುದನ್ನು ಬಿಜೆಪಿ ನಾಯಕರು ಸ್ಪಷ್ಪಪಡಿಸಲಿ, ಒಂದು ವೇಳೆ ತನ್ನ ವಿರುದ್ಧದ ಆರೋಪ ಸಾಬೀತಾದರೆ ಇವತ್ತೇ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಆದರೆ, ಮಾಜಿ ಸಿಎಂ ಬೊಮ್ಮಾಯಿ, ಅಶೋಕ್ ನಿವೃತ್ತಿ ಆಗುತ್ತಾರೆಯೇ ಎಂದು ಸವಾಲ್ ಹಾಕಿದ ಡಿಕೆಶಿ, ತನ್ನ ವಿರುದ್ಧ ಚುನಾವಣೆಯಲ್ಲಿ 1 ಲಕ್ಷಕ್ಕೂ  ಅಧಿಕ ಮತಗಳಿಂದ ಸೋತಿ ಠೇವಣಿ ಕಳೆದುಕೊಂಡ ಆರ್. ಅಶೋಕ ಗೆ ಹೇಗೆ ಉತ್ತರಿಸಬೇಕು ಎಂಬುದು ಗೊತ್ತಿದೆ ಎಂದು ಏಕ ವಚನದಲ್ಲಿಯೇ ವಾಗ್ದಾಳಿ ನಡೆಸಿದರು. 

ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ ಎಂಬ ಗುತ್ತಿಗೆದಾರರ ಸವಾಲಿಗೆ ಪ್ರತಿಕ್ರಿಯಿಸಿದ ಡಿಕೆಶಿ, ರಸ್ತೆಯಲ್ಲಿ ಹೋಗುವವರ ಪ್ರಶ್ನೆಗಳಿಗೆ ನಾನು ಉತ್ತರ ಕೊಡಲ್ಲ, ಎಲ್ಲಿ ಉತ್ತರ ಕೊಡಬೇಕೋ ಅಲ್ಲಿ ಉತ್ತರ ಕೊಡುತ್ತೇನೆ. ಇವರ ಹಿಂದೆ ಯಾರು ಇದ್ದಾರೆ ಎಂಬುದು ಗೊತ್ತಿದೆ. ಒಂದು ವೇಳೆ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದರೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಲೋಕಾಯುಕ್ತಕ್ಕೆ ದೂರು ನೀಡಲಿ ಎಂದರು.

Leave a Reply

Your email address will not be published. Required fields are marked *

error: Content is protected !!