ಡಿಕೆ.ಶಿವಕುಮಾರ್ ಯಾವುದೇ ಕಮಿಷನ್ ಕೇಳಿಲ್ಲ, ಪಾವತಿಯನ್ನೂ ಕಡಿತಗೊಳಿಸಿಲ್ಲ: ಬಿಬಿಎಂಪಿ ಗುತ್ತಿದಾರ ಸಂಘ
ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ನಮ್ಮಿಂದ ಯಾವುದೇ ಕಮಿಷನ್ ಕೇಳಿಲ್ಲ, ಪಾವತಿಯನ್ನೂ ಕಡಿತಗೊಳಿಸಿಲ್ಲ ಎಂದು ಬಿಬಿಎಂಪಿ ಗುತ್ತಿಗೆದಾರ ಸಂಘ ಸ್ಪಷ್ಟಪಡಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಗುತ್ತಿಗೆದಾರ ಸಂಘದ ಅಧ್ಯಕ್ಷ ನಾಗೇಂದ್ರ ಅವರು, ಬಿಲ್‌ಗಳು ಏಪ್ರಿಲ್ 2021 ರಿಂದ ಜೂನ್ 2023 ರವರೆಗೆ ಬಾಕಿ ಉಳಿದಿವೆ. ಈವರೆಗೆ 2,593 ಕೋಟಿ ರೂ.ಗಳ 4,440 ವಾರ್ಡ್ ಮಟ್ಟದ ಸಿವಿಲ್ ಕಾಮಗಾರಿಗಳನ್ನು ನಡೆಸಲಾಗಿದೆ. ಕಳೆದ ಎರಡು ತಿಂಗಳಿನಿಂದ ಗುತ್ತಿಗೆದಾರ ಸಂಘದ ಸದಸ್ಯರು ಶಿವಕುಮಾರ್ ಅವರನ್ನು ಕನಿಷ್ಠ ಆರು ಬಾರಿ ಭೇಟಿ ಮಾಡಿದ್ದಾರೆ. ಈ ವೇಳೆ ಉಪ ಮುಖ್ಯಮಂತ್ರಿಗಳು ನಮ್ಮಿಂದ ಯಾವುದೇ ಕಮಿಷನ್ ಕೇಳಿಲ್ಲ, ಪಾವತಿಯನ್ನೂ ಕಡಿತಗೊಳಿಸಿಲ್ಲ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳು ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಶಿವಕುಮಾರ್ ವಿರುದ್ಧದ ಕೇಳಿ ಬರುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ತಿಳಿಸಿದ್ದಾರೆ. ವೈಯಕ್ತಿಕ ಕಾರಣಗಳಿಗಾಗಿ ಈ ಆರೋಪಗಳನ್ನು ಮಾಡಲಾಗುತ್ತಿದೆ ಎಂದೆನಿಸುತ್ತಿದೆ. ಇಂತಹ ಆಧಾರ ರಹಿತ ಆರೋಪಗಳನ್ನು ಒಕ್ಕೊರಲಿನಿಂದ ಖಂಡಿಸುತ್ತೇವೆ ಎಂದು ಹೇಳಿದರು.
ಪ್ರಸ್ತುತ ಎದುರಾಗಿರುವ ಸಮಸ್ಯೆಗಳು ಪಾಲಿಕೆ ಮುಖ್ಯ ಆಯುಕ್ತರು ಹಾಗೂ ಬಿಬಿಎಂಪಿ ಹಣಕಾಸು ಇಲಾಖೆಯ ವಿಶೇಷ ಆಯುಕ್ತರ ಅಸಹಕಾರವೇ ಇದಕ್ಕೆ ಕಾರಣ ಎಂದು ಆರೋಪಿಸಿದರು. ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿದೆವು. ಸಭೆ ನಡೆಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಬಾಕಿ ಇರುವ ಬಿಲ್‌ಗಳನ್ನು ಶೀಘ್ರ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ನಾವು ಯಾವುದೇ ಮುಷ್ಕರಕ್ಕೆ ಕರೆ ನೀಡಿಲ್ಲ. ವಾರ್ಡ್ ಮಟ್ಟದ ಕಾಮಗಾರಿಗಳನ್ನು ಕಾರ್ಯಗತಗೊಳಿಸುವುದನ್ನು ಮುಂದುವರಿಸುತ್ತೇವೆಂದು ಸ್ಪಷ್ಟಪಡಿಸಿದರು.
ನಿನ್ನೆಯಷ್ಟೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರ ರೊಂದಿಗೆ ಡಿಕೆ ಶಿವಕುಮಾರ್ ಅವರು ಸಭೆ ನಡೆಸಿದರು. ಈ ವೇಳೆ ಕಳೆದ 28 ತಿಂಗಳ ಬಾಕಿ ಬಿಲ್‌ಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.