ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ಸೋಲು; ವಿಶ್ವಾಸಮತ ಗೆದ್ದ ಪ್ರಧಾನಿ ಮೋದಿ

ನವದೆಹಲಿ: ಮಣಿಪುರ ಹಿಂಸಾಚಾರದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಲೋಕಸಭೆಯಲ್ಲಿ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಗುರುವಾರ ಸೋಲಾಗಿದೆ.

ಜುಲೈ 26 ರಂದು ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದವು. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಅದನ್ನು ಅಂಗೀಕರಿಸಿ, ಚರ್ಚೆಗೆ ಅವಕಾಶ ನೀಡಿದ್ದರು.

ಇಂದು ಅವಿಶ್ವಾಸ ನಿರ್ಣಯದ ಮೇಲೆ ಮಾತನಾಡಿದ ಪ್ರಧಾನಿ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಈ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರು ಮಣಿಪುರ, ಮಣಿಪುರ ಎಂದು ಘೋಷಣೆ ಕೂಗುತ್ತಾ ಕಲಾಪದಿಂದ ಹೊರನಡೆದರು.

ಪ್ರಧಾನಿ ಮೋದಿ ಅವರ ಸುದೀರ್ಘ ಭಾಷಣದ ನಂತರ, ಪ್ರತಿಪಕ್ಷಗಳ ಸಭಾತ್ಯಾಗದ ನಡುವೆ ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಲಾಯಿತು. ಬಳಿಕ ಧ್ವನಿಮತದ ಮೂಲಕ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಲಾಯಿತು. ಇದರೊಂದಿಗೆ ಪ್ರತಿಪಕ್ಷಗಳ ಮೈತ್ರಿಕೂಟ INDIAಗೆ ಸೋಲುಂಟಾಗಿದೆ.

ಭಾಷಣದ ಕೊನೆಯಲ್ಲಿ ಮಣಿಪುರ ವಿಚಾರವನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಮಣಿಪುರ ಘಟನೆ ಬಗ್ಗೆ ಸದನದಲ್ಲಿ ಅಮಿತ್ ಶಾ ಅವರು ಮಾಹಿತಿ ನೀಡಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ಕೇಂದ್ರ, ಮಣಿಪುರ ಸರ್ಕಾರದಿಂದ ಯತ್ನ ನಡೆಯುತ್ತಿದೆ. ಮಣಿಪುರ ರಾಜ್ಯದಲ್ಲಿ ಖಂಡಿತಾ ಶಾಂತಿ ನೆಲೆಸಲಿದೆ ಎಂದು ಹೇಳಿದರು. 

ಇಡೀ ದೇಶ ನಿಮ್ಮ ಜೊತೆಗಿದೆ, ನಾವೆಲ್ಲರೂ ಒಟ್ಟಾಗಿ ಹೋರಾಡೋಣ. ಮಣಿಪುರ ರಾಜ್ಯ ಅಭಿವೃದ್ಧಿಯಾಗಲಿದೆ, ಶಾಂತಿ ಸುವ್ಯವಸ್ಥೆ ನೆಲೆಸಲಿದೆ ಎಂದು ಪ್ರಧಾನಿ ಭರವಸೆ ನೀಡಿದರು.

Leave a Reply

Your email address will not be published. Required fields are marked *

error: Content is protected !!