ವಿಪಕ್ಷಗಳ ಅವಿಶ್ವಾಸ ನಿರ್ಣಯ ಮಂಡನೆ ನಮಗೆ ಅದೃಷ್ಟ ತರಲಿದೆ: ಲೋಕಸಭೆಯಲ್ಲಿ ಪ್ರಧಾನಿ ಮೋದಿ
ಹೊಸದಿಲ್ಲಿ: ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದು, ಪ್ರತಿಯೊಬ್ಬ ಸಂಸದರ ಅಭಿಪ್ರಾಯವನ್ನು ನಾನು ಕೇಳಿದ್ದೇನೆ. ಭಾರತ ಮತ್ತೆ ಮತ್ತೆ ನಮ್ಮ ಮೇಲೆ ನಂಬಿಕೆ ಇಟ್ಟಿದೆ. ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದನ್ನು ದೇವರ ಆಶೀರ್ವಾದ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ʼಇದು 2018 ರಲ್ಲೂ ಸಂಭವಿಸಿತು. ಆಗಲೂ ನಾನು ಹೇಳಿದ್ದೆ, ಈ ಅವಿಶ್ವಾಸ ನಿರ್ಣಯ ನಮ್ಮ ಸರ್ಕಾರದಲ್ಲ, ಬದಲಾಗಿ ಅವರದ್ದು ಎಂದು. ಮತದಾನ ನಡೆದಾಗ, ಜನರು ನಮಗಲ್ಲ, ಅವರಿಗೆ (ವಿರೋಧ ಪಕ್ಷಗಳಿಗೆ) ತಮ್ಮ ಅವಿಶ್ವಾಸವನ್ನು ಘೋಷಿಸಿದರು. ಎನ್‌ಡಿಎ ಮತ್ತು ಬಿಜೆಪಿ ಹೆಚ್ಚು ಮತಗಳನ್ನು ಪಡೆದಿವೆ. ಒಂದು ರೀತಿಯಲ್ಲಿ ವಿಪಕ್ಷಗಳ ಅವಿಶ್ವಾಸ ಗೊತ್ತುವಳಿ ನಮಗೆ ಅದೃಷ್ಟವೇ ಸರಿ. ಎನ್‌ಡಿಎ ಬಿಜೆಪಿ ಭಾರಿ ಜನಾದೇಶದೊಂದಿಗೆ ಮರಳಿ ಅಧಿಕಾರಕ್ಕೆ ಬರುತ್ತದೆ” ಎಂದು ಹೇಳಿದ್ದಾರೆ.
ನಿಮಗೆ (ವಿರೋಧ ಪಕ್ಷಗಳಿಗೆ) ಬಡವರ ಹಸಿವಿನ ಬಗ್ಗೆ ಚಿಂತೆಯಿಲ್ಲ, ನಿಮಗೆ ಅಧಿಕಾರದ ಬಗ್ಗೆ ಮಾತ್ರ ಚಿಂತೆ. ನೀವು ಯುವಕರ ಭವಿಷ್ಯದ ಬಗ್ಗೆ ಚಿಂತಿಸುತ್ತಿಲ್ಲ, ನಿಮ್ಮ ಭವಿಷ್ಯದ ಬಗ್ಗೆ ಮಾತ್ರ ಚಿಂತಿಸುತ್ತಿದ್ದೀರಿ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.
ವಿರೋಧ ಪಕ್ಷಗಳಿಂದ ಸಭಾತ್ಯಾಗ: ಅವಿಶ್ವಾಸ ನಿರ್ಣಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಉತ್ತರಿಸುವಾಗ ವಿರೋಧ ಪಕ್ಷಗಳು ಲೋಕಸಭೆಯಿಂದ ಸಭಾತ್ಯಾಗ ಮಾಡಿವೆ. ಇದಕ್ಕೆ ಪ್ರತಿಯಾಗಿ, “ಅವರು ನಮ್ಮನ್ನು ತೆಗಳುತ್ತಾರೆ. ಆದರೆ, ಅವರಿಗೆ ನಮ್ಮ ಮಾತನ್ನು ಕೇಳಿಸಿಕೊಳ್ಳುವ ವ್ಯವಧಾನವಿಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.
“ವಿರೋಧ ಪಕ್ಷಗಳು ತಮ್ಮ ಮೈತ್ರಿಕೂಟದ ಹೆಸರನ್ನು INDIA ಎಂದು ಬದಲಾಯಿಸಿಕೊಂಡು, ತಾವೇ ದೇಶದ ಆಡಳಿತವನ್ನು ನಡೆಸುತ್ತಿದ್ದೇವೆ ಎಂದು ಭಾವಿಸಿಕೊಂಡಿವೆ. ಆದರೆ, ಇದು ದುರಹಂಕಾರದ ಪಕ್ಷಗಳ ಭ್ರಮೆಯಲ್ಲದೆ ಮತ್ತೇನಲ್ಲ” ಎಂದೂ ತಮ್ಮ ಭಾಷಣದ ವೇಳೆ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.