ವೈದ್ಯರ ಮೇಲೆ ಹಲ್ಲೆ ತಡೆಯುವ ಸಾಂಕ್ರಮಿಕ ರೋಗಗಳ ವಿಧೇಯಕ ಅಂಗೀಕಾರ
ಬೆಂಗಳೂರು: ಆಡಳಿತ ಪಕ್ಷ, ವಿಪಕ್ಷ ಸದಸ್ಯರ ವಿರೋಧದ ನಡುವೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಿಧೇಯಕವನ್ನು ವಿಧಾನಸಭೆಯಲ್ಲಿ ಹಾಗೂ ವೈದ್ಯರ ಮೇಲೆ ಹಲ್ಲೆ ತಡೆಯುವ ಸಾಂಕ್ರಮಿಕ ರೋಗಗಳ ತಿದ್ದುಪಡಿ ವಿಧೇಯಕ 2020ಯನ್ನು ವಿಧಾನ ಪರಿಷತ್ ನಲ್ಲಿ ಶುಕ್ರವಾರ ಅಂಗೀಕರಿಸಲಾಗಿದೆ.
ಈಗಾಗಲೇ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿರುವ ಕರ್ನಾಟಕ ಸಾಂಕ್ರಾಮಿಕ ರೋಗಗಳ ವಿಧೇಯಕ 2020 ವನ್ನು ವಿಧಾನ ಪರಿಷತ್ತಿನಲ್ಲಿ ಮಂಡಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು, ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು, ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ, ಹಲ್ಲೆ ಮಾಡಿದರೆ ಶಿಕ್ಷೆ ಹಾಗೂ ದಂಡದ ಮೊತ್ತ ಹೆಚ್ಚಿಸಲಾಗುವುದು ಎಂದರು.
ಈ ಮೊದಲು ವೈದ್ಯಕೀಯ ಸಮೂಹದ ಮೇಲೆ ಮೂರು ತಿಂಗಳ ಜೈಲುವಾಸದ ಶಿಕ್ಷೆ ಇತ್ತು. ಕೋವಿಡ್ ವಾರಿಯಸ್ ಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿಯಾಗುತ್ತಿದ್ದು, ಇತ್ತೀಚೆಗೆ ಹಲ್ಲೆ ಪ್ರಕರಣಗಳು ಕಂಡು ಬಂದಿವೆ. ಕೇಂದ್ರ ಸರ್ಕಾರವು ಸಹ ಕಾನೂನು ಜಾರಿ ಮಾಡಿದೆ. ಯಾರೇ ವ್ಯಕ್ತಿಗಳು ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ವೈದ್ಯರಿಗೆ ಅಡ್ಡಿಪಡಿಸಿದರೆ, ಹಲ್ಲೆ ಮಾಡಿದರೆ ಮೂರು ತಿಂಗಳಿಂದ ಐದು ವರ್ಷದವರೆಗೆ ಜೈಲು ಶಿಕ್ಷೆ. 50 ಸಾವಿರದಿಂದ 2 ಲಕ್ಷ ರೂ.ಗಳವರೆಗೆ ದಂಡ ವಿಧಿಸಲಾಗುವುದು ಎಂದರು.
ಇನ್ನು ಆಡಳಿತ ಪಕ್ಷದ ಸದಸ್ಯರು, ಕಾಂಗ್ರೆಸ್-ಜೆಡಿಎಸ್ ಶಾಸಕರ ವಿರೋಧದ ನಡುವೆಯೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಧ್ವನಿಮತದ ಅಂಗೀಕಾರ ದೊರೆಯಿತು.
ವಿಧಾನ ಸಭೆಯಲ್ಲಿಂದು 2020ನೇ ಸಾಲಿನ ಬೆಂಗಳೂರು ಅಭಿವೃದ್ದಿ (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚನೆ ಚೆರ್ಚೆ ವೇಳೆ ಅಧಿವೇಶನದಲ್ಲಿ ಭಾರೀ ಚೆರ್ಚೆಗೆ ಗ್ರಾಸವಾಯಿತು. ಸರ್ಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡು 12 ವರ್ಷ ಅಸ್ಥಿತ್ವದಲ್ಲಿರುವ ಕಟ್ಟಡಗಳಿಗೆ ದರ ನಿಗದಿಪಡಿಸಿ ಸ್ವಾಧೀನ ಕೊಡುವ ಈ ವಿಧೇಯಕಕ್ಕೆ ಬಿಜೆಪಿಯ ಕೆ.ಜಿ.ಬೋಪಯ್ಯ ಹಾಗೂ ಜೆಡಿಎಸ್‌ನ ಎ.ಟಿ.ರಾಮಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವಿಧೇಯಕ ಮಂಡಿಸುತ್ತಲೇ ಆಕ್ಷೇಪ ವ್ಯಕ್ತಪಡಿಸಿದ ಎ.ಟಿ.ರಾಮಸ್ವಾಮಿ, ಈ ತಿದ್ದುಪಡಿ ಹಿಂದೆ ಬಡವರ ಹಿತ ಇಲ್ಲ. ಅಕ್ರಮದಾರರ ಹಿತ ಇದೆ. ಅಮಾಯಕರು ಬಿಡಿಎ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದಾರಾ? ಕಾನೂನು ಬಾಹಿರ ಸ್ವಾಧೀನ ಸ್ಥಾಪನೆ ಮಾಡಿದವರಿಗೆ ಕಾನೂನು ಬದ್ಧ ಸ್ವಾಧೀನ ಕೊಡಲು ಈ ವಿಧೇಯಕ ತರಲಾಗಿದೆ. ಇದನ್ನು ಬಿಬಿಎಂಪಿ ಚುನಾವಣೆ ದೃಷ್ಟಿಯಲ್ಲಿಟ್ಟು ಕೊಂಡು ತರಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.