ಉಡುಪಿ ಪ್ರಾಕೃತಿಕ ವಿಕೋಪ – ಪರಿಹಾರ ಧನ ಹೆಚ್ಚಳ, ಅವಧಿ ವಿಸ್ತರಣೆ: ರಘುಪತಿ ಭಟ್
ಉಡುಪಿ: ಕಳೆದ ವಾರ ಉಡುಪಿಯಲ್ಲಿ ಭಾರಿ ಮಳೆಗೆ ಮನೆಗಳಿಗೆ, ಅಂಗಡಿ ಮುಂಗಟ್ಟುಗಳಿಗೆ ನುಗ್ಗಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿತ್ತು. ಈ ಸಂಬಂಧ ಉಡುಪಿ ಜಿಲ್ಲೆಗೆ ಹೆಚ್ಚಿನ ಪರಿಹಾರ ಮಂಜೂರು ಮಾಡುವುದು, ನೆರೆ ನೀರು ನುಗ್ಗಿ ಹಾನಿಯಾದ ಮನೆಗಳಿಗೆ, ಮನೆಯೊಳಗಿನ ವಸ್ತುಗಳಿಗೆ ಹೆಚ್ಚಿನ ಪರಿಹಾರ ಒದಗಿಸುವುದು ಹಾಗೂ ಸೆಪ್ಟೆಂಬರ್ ವರೆಗೆ ಇದ್ದ ಪ್ರಾಕೃತಿಕ ವಿಕೋಪದಡಿ ಪರಿಹಾರ ನೀಡುವ ಅವಧಿಯನ್ನು ವಿಸ್ತರಿಸುವ ಬಗ್ಗೆ ಶಾಸಕ ಕೆ. ರಘುಪತಿ ಭಟ್ ಮುಖ್ಯಮಂತ್ರಿಯವರಿಗೆ ಹಾಗೂ ಕಂದಾಯ ಸಚಿವರಿಗೆ ಮನವಿ ಮಾಡಿ ನೆರೆಯಿಂದ ಉಡುಪಿಯಲ್ಲಿ ಹಾನಿಯಾಗಿರುವ ಸಂಪೂರ್ಣ ವಿವರಗಳನ್ನು ಮನವರಿಕೆ ಮಾಡಿರುತ್ತಾರೆ.
ಈ ಬಗ್ಗೆ ಸೆ. 25 ರ ಆದೇಶದಂತೆ ಸರ್ಕಾರವು ಪ್ರವಾಹದಿಂದ ಬಾಧಿತವಾದ ಸಂತ್ರಸ್ತರಿಗೆ ಬಟ್ಟೆಬರೆ ಹಾಗೂ ದಿನಬಳಕೆ ವಸ್ತುಗಳಿಗೆ ಹೆಚ್ಚುವರಿಯಾಗಿ ಒಟ್ಟು ರೂ.10,000/- ಪರಿಹಾರವನ್ನು ನೀಡಲು ಹಾಗೂ ನೆರೆಯ ನೀರು ನುಗ್ಗಿ ಹಾನಿಯಾದ ಮನೆಯ ಪುನರ್ ನಿರ್ಮಾಣ, ದುರಸ್ತಿ ಕಾರ್ಯಗಳಿಗೆ ನಿಗಧಿಪಡಿಸಿದ ಪರಿಹಾರವನ್ನು ಹೆಚ್ಚುವರಿಗೊಳಿಸಿ ಹಾಗೂ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.
ಹೆಚ್ಚುವರಿ ಪರಿಹಾರ ನೀಡಲು ಹಾಗೂ ಪರಿಹಾರ ನೀಡಲು ಇರುವ ಅವಧಿಯನ್ನು ವಿಸ್ತರಿಸಿದ ರಾಜ್ಯದ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ ಹಾಗೂ ಕಂದಾಯ ಸಚಿವರಾದ ಆರ್. ಅಶೋಕ್ ಅವರಿಗೆ ಶಾಸಕ ಕೆ. ರಘುಪತಿ ಭಟ್ ಅಭಿನಂದನೆ ಸಲ್ಲಿಸಿದ್ದಾರೆ.