ಮೋದಿ ಕೇವಲ ಬಿಜೆಪಿಯ, ಹಿಂದೂಗಳ ಪ್ರಧಾನಿ ಎಂಬ ಭ್ರಮೆಯಲ್ಲಿದ್ದಾರೆ- ಅಶೋಕ್ ಗೆಹ್ಲೋಟ್
ಜೈಪುರ: ಪ್ರಧಾನಿ ನರೇಂದ್ರ ಮೋದಿ ಕೇವಲ ಭಾರತೀಯ ಜನತಾ ಪಕ್ಷ ಹಾಗೂ ಹಿಂದೂಗಳ ಪ್ರಧಾನಿ ಎಂಬ ಭ್ರಮೆಯಲ್ಲಿದ್ದಾರೆ. ಇದು ತೀರಾ ಅಪಾಯಕಾರಿ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಾಗ್ದಾಳಿ ನಡೆಸಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಅವರ ನಡವಳಿಕೆ, ಮಾತು ಹಾಗೂ ದೇಹಭಾಷೆ ಒಂದೇ ಪಕ್ಷದ ಪ್ರಧಾನಿ ಎನ್ನುವುದನ್ನು ಬಿಂಬಿಸುವಂತಿದೆ. ಅವರು ಕೇವಲ ಹಿಂದೂಗಳ ಪ್ರಧಾನಿ ಎಂಬ ಭಾವನೆ ಇದೆ. ಇದು ತೀರಾ ಅಪಾಯಕಾರಿ ಅಂಶ” ಎಂದರು
ಮೋದಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದವರು. ಕಾಂಗ್ರೆಸ್ ಪಕ್ಷ ಮತಗಳ ನಿಯಮವನ್ನು ಅನುಸರಿಸುತ್ತಿದೆ. ಆದರೆ ಮೋದಿ ಏಕೆ ತಾವು ಬಿಜೆಪಿ ಹಾಗೂ ಹಿಂದೂಗಳ ಪ್ರಧಾನಿ ಎಂದು ಭಾವಿಸುತ್ತಾರೆ ಎಂದು ಪ್ರಶ್ನಿಸಿದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ಈ ಆರೋಪಗಳು ನಿರಾಧಾರ ಎಂದು ಸಮರ್ಥಿಸಿ ಕೊಂಡಿದೆ. “ಗೆಹ್ಲೋಟ್ ಹೇಳಿಕೆ ಓಲೈಸುವಿಕೆಗೆ ಉತ್ತೇಜನ ನೀಡುವಂಥದ್ದು. ಪ್ರಧಾನಿ ಮೋದಿ ಎಲ್ಲರ ಕಲ್ಯಾಣ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಹಾಗೂ ಅವರ ಯೋಜನೆಗಳು ಇಡೀ ಸಮಾಜದ ಎಲ್ಲ ವರ್ಗಗಳಿಗಾಗಿ ಸೃಷ್ಟಿಯಾಗಿವೆ” ಎಂದು ಬಿಜೆಪಿ ವಕ್ತಾರ ರಾಮ್ ಲಾಲ್ ಶರ್ಮಾ ಹೇಳಿದ್ದಾರೆ.
ಮೋದಿ ಮಹಾತ್ಮಗಾಂಧೀಜಿಯವರ ರಾಜ್ಯದವರು ಎನ್ನುವುದು ಗೊತ್ತಿರುವುದರಿಂದ ಮತ್ತು ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವದ ಕಾನೂನನ್ನು ಜೀವಂತವಾಗಿ ಇಟ್ಟಿರುವುದರಿಂದ ಮೋದಿ ವಿದೇಶಗಳಲ್ಲಿ ಕೂಡಾ ಗೌರವ ಪಡೆಯುತ್ತಿದ್ದಾರೆ. ಮೋದಿ ವಿಶ್ವದಲ್ಲೇ ದೊಡ್ಡ ನಾಯಕ ಎಂದು ಹೇಳಲಾಗುತ್ತಿದೆ. ಅಮೆರಿಕ, ಜರ್ಮನಿಯ ಜನ ಮಣಿಪುರದ ಬಗ್ಗೆ ಏನು ಹೇಳುತ್ತಿದ್ದಾರೆ ಎನ್ನುವುದನ್ನು ನೀವು ನೋಡಬೇಕು ಎಂದು ಗೆಹ್ಲೋಟ್ ಹೇಳಿದ್ದಾರೆ.
ಮಣಿಪುರದಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಸುಪ್ರೀಂಕೋರ್ಟ್ ಪ್ರಶ್ನಿಸಿದಾಗ, ಕಾಂಗ್ರೆಸ್ ಆಡಳಿತದ ರಾಜಸ್ಥಾನ ಮತ್ತು ಛತ್ತೀಸ್ಗಢವನ್ನು ಮೋದಿ ಮಣಿಪುರ ಜತೆ ಹೋಲಿಸಿದ್ದರು. ಇದು ಈ ರಾಜ್ಯಗಳಿಗೆ ಮಾಡಿದ ಅವಮಾನ. ಹಿಂಸೆಗೆ ಹಿಂಸೆ ಎಂದೂ ಉತ್ತರವಾಗಲಾರದು ಎಂದು ಅಶೋಕ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ.