ಗೋವನ್ನು ರಾಷ್ಟ್ರ ಪ್ರಾಣಿ ಎಂದು ಘೋಷಿಸುವುದಿಲ್ಲ: ಕೇಂದ್ರ ಸರ್ಕಾರ
ಹೊಸದಿಲ್ಲಿ: ಹುಲಿಯು ಭಾರತದ ರಾಷ್ಟ್ರ ಪ್ರಾಣಿಯಾಗಿದ್ದು, ಗೋವನ್ನು ರಾಷ್ಟ್ರ ಪ್ರಾಣಿಯನ್ನಾಗಿ ಘೋಷಿಸುವ ಯಾವ ಇರಾದೆಯೂ ಕೇಂದ್ರ ಸರ್ಕಾರಕ್ಕಿಲ್ಲ ಎಂದು ಸೋಮವಾರ ಕೇಂದ್ರ ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ ಲೋಕಸಭೆಗೆ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವೇನಾದರೂ ಗೋವನ್ನು ರಾಷ್ಟ್ರ ಪ್ರಾಣಿಯನ್ನಾಗಿ ಘೋಷಿಸಲಿದೆಯೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯವನ್ನುದ್ದೇಶಿಸಿ ಬಿಜೆಪಿ ಸಂಸದ ಭಾಗೀರಥ್ ಚೌಧರಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
ಭಾರತೀಯತೆ ಹಾಗೂ ಸನಾತನ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಭಾಗವಾಗಿ ಸಂಸತ್ತು ಶಾಸನವೊಂದನ್ನು ತರುವ ಮೂಲಕ ಭಾರತದ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಗೋಮಾತೆ (ಹಸು)ಯನ್ನು ರಾಷ್ಟ್ರ ಪ್ರಾಣಿಯನ್ನಾಗಿ ಘೋಷಿಸುವ ಪ್ರಸ್ತಾವವನ್ನು ಪರಿಗಣಿಸುತ್ತಿದೆಯೆ ಎಂದು ಬಿಜೆಪಿ ಸಂಸದ ಭಾಗೀರಥ್ ಚೌಧರಿ ಅವರು ಪ್ರಶ್ನಿಸಿದ್ದರು.
ಈ ಪ್ರಶ್ನೆಗೆ ಉತ್ತರಿಸಿದ ಸಚಿವ ಜಿ. ಕಿಶನ್ ರೆಡ್ಡಿ, “ಭಾರತ ಸರ್ಕಾರವು ಹುಲಿ ಹಾಗೂ ನವಿಲನ್ನು ಕ್ರಮವಾಗಿ ರಾಷ್ಟ್ರ ಪ್ರಾಣಿ ಹಾಗೂ ರಾಷ್ಟ್ರ ಪಕ್ಷಿ ಎಂದು ಗುರುತಿಸಿದೆ. ಈ ಎರಡನ್ನೂ ವನ್ಯಜೀವಿ ಪ್ರಾಣಿಗಳ (ರಕ್ಷಣೆ) ಕಾಯ್ದೆ, 1972 ಅನ್ವಯ ಪರಿಚ್ಛೇದ-1ರಲ್ಲಿ ಸೇರ್ಪಡೆ ಮಾಡಲಾಗಿದೆ. ಭಾರತ ಸರ್ಕಾರವು ಹಲವು ವರ್ಷಗಳಿಂದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಧಿಕೃತ ದಾಖಲೆಗಳಲ್ಲಿ ಕಂಡು ಬರುವುದಿಲ್ಲ. ಹೀಗಾಗಿ, ಸಚಿವಾಲಯವು ಮೇ 30, 2011ರಲ್ಲಿ ಹುಲಿ ಮತ್ತು ನವಿಲನ್ನು ಕ್ರಮವಾಗಿ ರಾಷ್ಟ್ರ ಪ್ರಾಣಿ ಹಾಗೂ ರಾಷ್ಟ್ರ ಪಕ್ಷಿ ಎಂದು ಮರು ಅಧಿಸೂಚನೆ ಹೊರಡಿಸಿದೆ” ಎಂದು ಉತ್ತರಿಸಿದರು.
ಅಲಹಾಬಾದ್ ಹಾಗೂ ಜೈಪುರ ಹೈಕೋರ್ಟ್ ಗಳೇನಾದರೂ ಗೋಮಾತೆಯನ್ನು ರಾಷ್ಟ್ರ ಪ್ರಾಣಿಯನ್ನಾಗಿ ಘೋಷಿಸಲು ಕ್ರಮ ಕೈಗೊಳ್ಳಿ ಎಂದು ಆದೇಶಿಸಿವೆಯೆ ಎಂಬ ನಿರ್ದಿಷ್ಟ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಜಿ. ಕಿಶನ್ ರೆಡ್ಡಿ, ಈ ವಿಷಯವು ರಾಜ್ಯ ಶಾಸಕಾಂಗ ಪ್ರಾಧಿಕಾರಗಳ ಅಧೀನದಲ್ಲಿದೆ. “ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಶು ಸಂಗೋಪನೆ ಹಾಗೂ ಹೈನೋದ್ಯಮ ಇಲಾಖೆಗಳು ಸ್ಥಳೀಯ ಹಸುಗಳು ಸೇರಿದಂತೆ ಸ್ಥಳೀಯ ತಳಿಗಳ ರಕ್ಷಣೆಗಾಗಿ ಕೈಗೊಂಡಿರುವ ಪ್ರಯತ್ನಗಳಿಗೆ ಪೂರಕವಾಗಿ ಮತ್ತು ಬೆಂಬಲವಾಗಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಗೋಕುಲ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಈ ಇಲಾಖೆಯು ಹಸು ಹಾಗೂ ಅದರ ತಳಿಗಳು ಸೇರಿದಂತೆ ಪ್ರಾಣಿಗಳ ರಕ್ಷಣೆಗಾಗಿ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿದೆ” ಎಂದು ತಿಳಿಸಿದ್ದಾರೆ.