ರಾಹುಲ್ ಗಾಂಧಿಯ ಲೋಕಸಭಾ ಸದಸ್ಯತ್ವ ಮರುಸ್ಥಾಪನೆ
ಹೊಸದಿಲ್ಲಿ: ಲೋಕಸಭೆಯ ಸೆಕ್ರೆಟರಿಯೇಟ್ ಸೋಮವಾರ ಕೆಳಮನೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸದರಾಗಿ ಮರಳಲು ಸೋಮವಾರ ಅನುಮತಿ ನೀಡಿದೆ. ಈ ಮೂಲಕ ರಾಹುಲ್ ಗಾಂಧಿ ಅವರು ಲೋಕಸಭೆ ಸದಸ್ಯತ್ವವನ್ನು ಮರಳಿ ಪಡೆದಿದ್ದಾರೆ.
ಕಳೆದ ವಾರ, ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಲೋಕಸಭೆಯಲ್ಲಿ ನಾಳೆ ಆರಂಭವಾಗಲಿರುವ ಅವಿಶ್ವಾಸ ಗೊತ್ತುವಳಿ ಚರ್ಚೆಯಲ್ಲಿ ರಾಹುಲ್ ಭಾಗವಹಿಸಬೇಕೆಂದು ಕಾಂಗ್ರೆಸ್ ಬಯಸಿದೆ.
ಮೋದಿ ಉಪನಾಮ’ ಹೇಳಿಕೆಗಾಗಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆ ನೀಡಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಇಂದು ಮತ್ತೆ ಸಂಸತ್ತಿಗೆ ಪ್ರವೇಶಿಸಲು ಅವಕಾಶ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯ ನಂತರ ಮಣಿಪುರದ ಬಗ್ಗೆ ಸಮರ್ಪಿತ ಚರ್ಚೆಗೆ ವಿರೋಧ ಪಕ್ಷ INDIA ದ ಬೇಡಿಕೆಯ ಬಗ್ಗೆ ಸಂಸತ್ತಿನಲ್ಲಿ ಪದೇ ಪದೇ ಅಡ್ಡಿಯುಂಟಾಗುತ್ತಿರುವ ಸಮಯದಲ್ಲಿ ರಾಹುಲ್ ಗಾಂಧಿ ಅವರು ತಮ್ಮ ಕ್ಷೇತ್ರವಾದ ವಯನಾಡ್ ಅನ್ನು ಪ್ರತಿನಿಧಿಸುವ ಲೋಕಸಭೆಗೆ ಹಿಂತಿರುಗಲಿದ್ದಾರೆ.
ಶುಕ್ರವಾರ, ಸುಪ್ರೀಂ ಕೋರ್ಟ್, ರಾಹುಲ್ ಗಾಂಧಿ ಅವರ ದೋಷಾರೋಪಣೆಗೆ ತಡೆಯಾಜ್ಞೆ ನೀಡಿತ್ತು. ರಾಹುಲ್ ಅವರ ಹೇಳಿಕೆಗಳು ಉತ್ತಮ ಅಭಿರುಚಿಯಿಂದ ಕೂಡಿಲ್ಲದಿದ್ದರೂ, ಸಂಸತ್ತಿನಿಂದ ಅವರ ಅನರ್ಹತೆಯು ಅವರ ಮತದಾರರ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉಪನಾಮದ ಬಗ್ಗೆ ನೀಡಿರುವ ಹೇಳಿಕೆಗೆ ಮಾನನಷ್ಟ ಪ್ರಕರಣದಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಒಳಗಾದದ ನಂತರ ರಾಹುಲ್ ಗಾಂಧಿ ಅವರನ್ನು ಮೇ ತಿಂಗಳಲ್ಲಿ ಅನರ್ಹಗೊಳಿಸಲಾಯಿತು.
2019 ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಕರ್ನಾಟಕದ ಕೋಲಾರದಲ್ಲಿ ನಡೆದ ರ್ಯಾಲಿಯಲ್ಲಿ, ಪ್ರಧಾನಿ ಮೋದಿಯವರನ್ನು ಕೆಣಕುವ ಮೂಲಕ, ಎಲ್ಲಾ ಕಳ್ಳರಿಗೆ ಮೋದಿ ಉಪನಾಮ ಇರುವುದು ಹೇಗೆ ಎಂದು ಕೇಳಿದ್ದರು.