ಬಡವರ ಅಕ್ಕಿ ಕಿತ್ತುಕೊಂಡಿದ್ದಕ್ಕೆ ಶಾಪ ತಟ್ಟಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ರಾಜ್ಯದಲ್ಲಿ ಬಡವರ ಅಕ್ಕಿ ಕಿತ್ತಕೊಂಡ ಪರಿಣಾಮ, ಶಾಪ ತಟ್ಟಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಶುಕ್ರವಾರ ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 4.22 ಕೋಟಿ ಜನರಿಗೆ ಶೇ 70 ರಷ್ಟು ಜನರಿಗೆ ಅಕ್ಕಿ ಹಣ ಹಾಕಲಾಗುತ್ತಿದೆ. ಬಡವರಿಗೆ ಅಕ್ಕಿ ಕೊಡುವಲ್ಲಿ ಬಿಜೆಪಿ ರಾಜಕೀಯ ಮಾಡಿದೆ. ಆದರೆ ನಾವು ಪ್ರಜಾದನಿಯಲ್ಲಿ ಮಾತು ಕೊಟ್ಟಂತೆ ಗ್ಯಾರಂಟಿ ನೀಡಲು ಮುಂದಾಗಿದೆ ನಮ್ಮ ಸರಕಾರ. ಇದು ಬಿಜೆಪಿ ನಾಯಕರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜನರಿಗಿಂತ ಬಿಜೆಪಿಯವರಿಗೆ ದೊಡ್ಡ ಚಿಂತೆಯಾಗಿದೆ ಎಂದು ಹೇಳಿದರು.

ಶಕ್ತಿ ಯೋಜನೆ ಗ್ಯಾರಂಟಿ‌ ಕೂಡ ಈಡೇರಿಸಿದ್ದೇವೆ. ಪ್ರತಿ ನಿತ್ಯ 55 ಲಕ್ಷ ಮಹಿಳೆಯರು ಬಸ್ ಗಳಲ್ಲಿ ಉಚಿತವಾಗಿ ಓಡಾಡುತ್ತಿದ್ದಾರೆ. ಮೊದಲು 16 ಲಕ್ಷ ಮಹಿಳೆಯರು ಓಡಾಡುತ್ತಿದ್ದರು. ಈಗ ಹೆಚ್ಚಾಗಿದ್ದು, ದೇವಸ್ಥಾನಗಳಲ್ಲೂ ಜನ ಬರುತ್ತಿರುವುದರಿಂದ ಖುಷಿಯಾಗಿದೆ ಎಂದು ಧರ್ಮಸ್ಥಳದ ಹೆಗ್ಗಡೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಇದೀಗ ಮತ್ತೊಂದು‌ ಗ್ಯಾರಂಟಿ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತರುತ್ತಿದ್ದೇವೆ. ಯೋಜನೆಯಿಂದ 1.41 ಕೋಟಿ‌ ಜನರಿಗೆ ಲಾಭ ದೊರೆಯಲಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ 54.99 ಲಕ್ಷ, ಚಾಮುಂಡೇಶ್ವರಲ್ಲಿ 20.48 ಲಕ್ಷ, ಹೆಸ್ಕಾಂ 30.66 ಲಕ್ಷ, ಮೆಸ್ಕಾಂ 43.61 ಲಕ್ಷ ಹಾಗೂ ಜೆಸ್ಕಾಂನಲ್ಲಿ 20.21 ಲಕ್ಷ ಮನೆ ಉಪಯೋಗಿಗಳಿಗೆ ಸಿಗಲಿದೆ ಎಂದರು.

ಇದೇ ವೇಳೆ ಬಿಜೆಪಿ ಕುರಿತು ಟೀಕೆ ಮಾಡಿದ ಅವರು, ಚುನಾವಣೆ ಮುಗಿದು ಎರಡು ತಿಂಗಳು ಕಳೆದರೂ, ಬಜೆಟ್ ಅಧಿವೇಶನ ಮುಗಿದರೂ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರನ್ನು ಬಿಜೆಪಿ ನೇಮಕ ಮಾಡಿಲ್ಲ. ಬಿಜೆಪಿ ರಾಜಕೀಯವಾಗಿ ದಿವಾಳಿಯಾಗಿದೆ ಎಂದು ಹೇಳಿದರು. ಬಳಿಕ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ ಅವರು, ಜೆಡಿಎಸ್ ಮುಗಿದು ಹೋಗಿದೆ. ಸುಖಾ ಸುಮ್ಮನೆ ಪೆನ್ ಡ್ರೈವ್ ಇದೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಆದರೆ, ಆ ಪೆನ್ ಡ್ರೈವ್‌ನಲ್ಲಿ ಏನಿದೆ ಎಂಬುದನ್ನು ಅವರು ಬಹಿರಂಗಪಡಿಸುತ್ತಿಲ್ಲ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!