ದೇಶದ ಆರ್ಥಿಕತೆಯನ್ನು ಹಾಳುಗೆಡವಿದ ಪ್ರಧಾನಿ ಕರ್ನಾಟಕ ಮಾದರಿ ಅಭಿವೃದ್ಧಿಯನ್ನು ಅರ್ಥ ಮಾಡಿಕೊಳ್ಳಲಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸೇರಿ ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿ ಪ್ರವಾಸದಲ್ಲಿದ್ದಾರೆ. ನಿನ್ನೆ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಕರ್ನಾಟಕ ಕಾಂಗ್ರೆಸ್, ಲೋಕಸಭೆ ಚುನಾವಣೆಗೆ ತಯಾರಿ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲು ಸಭೆ ಕರೆಯಲಾಗಿತ್ತು.

ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ ಎಂದಿನಂತೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಕಾಂಗ್ರೆಸ್ ಅತಿ ಹೆಚ್ಚಿನ ಸ್ಥಾನ ಗೆಲ್ಲಬೇಕೆಂಬುದು ನಮ್ಮ ಗುರಿಯಾಗಿದೆ. ಇಂದು ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಜನರ ಒಲವಿದೆ. ನಾವು ನುಡಿದಂತೆ ನಡೆದಿದ್ದೇವೆ. ಗೆದ್ದು ಬಂದರೆ ಐದು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದು ನಾನು ಮತ್ತು ಡಿ ಕೆ ಶಿವಕುಮಾರ್ ಸಹಿ ಮಾಡಿ ಗ್ಯಾರಂಟಿ ಕಾರ್ಡನ್ನು ಮನೆಮನೆಗೆ ಹಂಚಿದ್ದೆವು. ಬಿಜೆಪಿಯವರು ಮತ್ತು ಜೆಡಿಎಸ್ ನವರು ನಮಗೆ ಮಾಡುವುದಕ್ಕೆ ಆಗುವುದಿಲ್ಲ ಎಂದು ಸುಳ್ಳು ಹೇಳುತ್ತಿದ್ದರು ಎಂದು ಟೀಕಿಸಿದ್ದರು. 

ಪ್ರಧಾನಿ ನರೇಂದ್ರ ಮೋದಿಯವರೇ ಐದು ಗ್ಯಾರಂಟಿಗಳನ್ನು ಜಾರಿಗೆ ತರಲು ಕಾಂಗ್ರೆಸ್ ಗೆ ಸಾಧ್ಯವಿಲ್ಲ. ತಂದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದರು. ಕಾಂಗ್ರೆಸ್ ಸರ್ಕಾರಕ್ಕೆ ಕರ್ನಾಟಕದಲ್ಲಿ ಅಭಿವೃದ್ಧಿಕೆಲಸಗಳನ್ನು ಮಾಡಲು ಹಣವಿಲ್ಲ ಎಂದು ದೂರಿದರು, ಅದು ಸಂಪೂರ್ಣವಾಗಿ ಸುಳ್ಳು. ನೂರಕ್ಕೆ ನೂರು ಅಸತ್ಯ. ನಾವು 5 ಗ್ಯಾರಂಟಿಗಳಿಗೆ ಬಜೆಟ್ ನಲ್ಲಿ ಹಣವನ್ನು ನೀಡಿದ್ದೇವೆ. ಈಗಾಗಲೇ 4 ಗ್ಯಾರಂಟಿಗಳು ಜಾರಿಯಾಗುತ್ತಿವೆ ಎಂದಿದ್ದರು.

ನಂತರ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ, ನಾವು ಬಜೆಟ್ ನಲ್ಲಿ ಐದು ಗ್ಯಾರಂಟಿಗಳಿಗೆ ಹಣ ಒದಗಿಸುವ ಜತೆಗೆ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 76 ಭರವಸೆಗಳಿಗೂ ಹಣ ನೀಡಿದ್ದೇವೆ. ಇವೆಲ್ಲವೂ ಎಲ್ಲಾ ಜಾತಿ, ಎಲ್ಲಾ ಧರ್ಮ, ಎಲ್ಲಾ ವರ್ಗದವರ ಬದುಕಿಗೂ ಸ್ಪಂದಿಸುವ ಯೋಜನೆಗಳಾಗಿವೆ. ಪ್ರತೀ ದಿನ ಒಂದೂವರೆ ಕೋಟಿಗೂ ಅಧಿಕ ಮಂದಿ ನಮ್ಮ ಸರ್ಕಾರದ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ದೇಶದ ಆರ್ಥಿಕತೆಯನ್ನು ಹಾಳು ಗೆಡವಿದ ಪ್ರಧಾನಿ ಮೋದಿ ಅವರು ಕರ್ನಾಟಕ ಮಾದರಿ ಅಭಿವೃದ್ಧಿಯನ್ನು ಅರ್ಥ ಮಾಡಿಕೊಳ್ಳಲಿ. ಇನ್ನಾದರೂ ದೇಶವನ್ನು ಸರಿ ದಾರಿಯಲ್ಲಿ ಮುನ್ನಡೆಸಲಿ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!