ನೂರೊಂದು ನೆನಪು ಎದೆಯಾಳದಲ್ಲಿ ಬಿಟ್ಟು ಹೋದ ಎಸ್.ಪಿ. ಬಾಲಸುಬ್ರಮಣ್ಯಂ
ಉಡುಪಿ(ಉಡುಪಿ ಟೈಮ್ಸ್ ವರದಿ): ಸಂಗೀತ ಲೋಕದ ಮಾಣಿಕ್ಯ ಎಸ್ ಪಿ ಬಾಲಸುಬ್ರಮಣ್ಯಂ ರವರು ಶುಕ್ರವಾರ ಮಧ್ಯಾಹ್ನ 1.04 ರಂದು ಕೊನೆಯುಸಿರೆಳೆದಿದ್ದಾರೆ. ಸುಮಾರು ಒಂದುವರೆ ತಿನಗಳಿಂದ ಜೀವನ್ಮರಣದಲ್ಲಿ ಹೋರಾಡುತ್ತಿದ್ದ ಎಸ್ ಪಿ ಬಿ ಇಂದು ಬಾರದ ಲೋಕಕ್ಕೆ ಪಯಣ ಬೆಳೆಸಿದರು.
ಕೊರೊನಾ ವೈರಸ್‌ಗೆ ತುತ್ತಾಗಿದ್ದ ಎಸ್‌ಪಿಬಿ ಕಳೆದ ಕೆಲವು ದಿನಗಳ ಹಿಂದೆ ಕೊರೊನಾದಿಂದ ಗುಣಮುಖರಾಗಿದ್ದರು. ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿರಲಿಲ್ಲ. ಕಳೆದ ಎರಡು ಮೂರು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು. ವೆಂಟಿಲೇಟರ್ ಮೂಲಕ ಉಸಿರಾಟ ನಡೆಸಿದ್ದರು.
ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಿದ್ದ ವೈದ್ಯರು ಅಮೆರಿಕದ ತಜ್ಞರ ನೆರವು ಕೂಡಾ ಪಡೆದುಕೊಂಡಿದ್ದರು. ಆದರೆ, ವೈದ್ಯರು ಹಾಗೂ ಕೋಟ್ಯಾಂತರ ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ.
ಶ್ರೀಪತಿ ಪಂಡಿತರಾಧ್ಯಲು ಬಾಲಸುಬ್ರಹ್ಮಣ್ಯಂ ಎಸ್ ಪಿ ಬಿ ಎಂದೇ ಖ್ಯಾತರಾಗಿದ್ದರು
ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆ ಸೇರಿದಂತೆ ಸುಮಾರು 16 ಭಾಷೆಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಎಸ್‌ಪಿಬಿ ಹಾಡಿದ್ದರು. ಅತಿ ಹೆಚ್ಚು ಹಾಡಿಗೆ ಧ್ವನಿಯಾಗಿದ್ದ ಎಸ್‌ಪಿಬಿ ಅವರು ಗಿನ್ನಿಸ್ ದಾಖಲೆಗೆ ಸಹ ಪಾತ್ರರಾಗಿದ್ದಾರೆ.
ತಮ್ಮ ಗಾಯನಕ್ಕಾಗಿ ಆರು ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. 25 ಬಾರಿ ಆಂಧ್ರ ಪ್ರದೇಶ ಸರ್ಕಾರ ನೀಡುವ ಪ್ರತಿಷ್ಠಿತ ನಂದಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಕರ್ನಾಟಕ ಹಾಗೂ ತಮಿಳುನಾಡು ರಾಜ್ಯ ಸರ್ಕಾರಗಳು ನೀಡುವ ರಾಜ್ಯ ಪ್ರಶಸ್ತಿಗಳು ಸಹ ಪಡೆದಿದ್ದಾರೆ. ಚಿತ್ರರಂಗದಲ್ಲಿ ಎಸ್‌ಪಿಬಿ ಅವರ ಕೊಡುಗೆಗೆ ಗೌರವಿಸಿ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಸಹ ಲಭಿಸಿದೆ.