ಖಾಸಗಿ ಕ್ಷಣಗಳ ವೀಡಿಯೊ ವೈರಲ್: ಮನನೊಂದ ವಿದ್ಯಾರ್ಥಿಗಳಿಬ್ಬರು ಆತ್ಮಹತ್ಯೆ
ಖಾಸಗಿ ಕ್ಷಣಗಳ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವುದರಿಂದ ಮನನೊಂದು ವಿದ್ಯಾರ್ಥಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆಯ ನಗರದಲ್ಲಿ ನಡೆದಿದೆ.
ನಗರದ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಕಳೆದ ಎರಡು ತಿಂಗಳ ಹಿಂದೆ ಕಾಲೇಜಿನ ಟೆರೆಸ್ ಮೇಲೆ ಖಾಸಗಿಯಾಗಿ ಕುಳಿತಿದ್ದ ಕ್ಷಣಗಳನ್ನು ಪಕ್ಕದ ಕಟ್ಟಡದಿಂದ ಯಾರೋ ತಮ್ಮ ಮೊಬೈಲ್ ಫೋನ್ ನಲ್ಲಿ ಸೆರೆ ಹಿಡಿದಿದ್ದರು. ಆ ವಿಡಿಯೋ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರಿಂದ ನೊಂದು ವಿದ್ಯಾರ್ಥಿನಿ ಆತ್ಮಹತ್ಯೆಗೈದಿದ್ದಾಳೆ. ಇದೇ ವಿಚಾರವಾಗಿ ಶುಕ್ರವಾರ ತಡರಾತ್ರಿ ವಿದ್ಯಾರ್ಥಿಯೂ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ವಿದ್ಯಾರ್ಥಿಗಳಿಬ್ಬರ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ತಿಳಿಸಿದ್ದಾರೆ.