ಉದ್ಯಮಿಗಳ ಪರವಲ್ಲ- ಕಾರ್ಮಿಕರ ಪರ ನಿಲ್ಲಿ:ಸಿಐಟಿಯು
ಉಡುಪಿ: ಚುನಾವಣೆಗೂ ಮುನ್ನ ಕಾರ್ಮಿಕರ, ರೈತರ ಹಾಗೂ ಜನರ ಪರ ಎಂದು ಹೇಳಿ ಅಧಿಕಾರ ಚುಕ್ಕಾಣಿ ಹಿಡಿದ ಬಿಜೆಪಿ ಸರ್ಕಾರ ಈಗ ಮೂರು ವರ್ಗಗಳ ಪರವಾದ ಕಾನೂನುಗಳನ್ನು ತಿದ್ದುಪಡಿ ಮಾಡಲು ಹೊರಟಿದೆ ಎಂದು ಸಿಐಟಿಯು ಜಿಲ್ಲಾ ಘಟಕದ ಅಧಕ್ಷ ಕೆ.ಶಂಕರ್ ವಾಗ್ದಾಳಿ ನಡೆಸಿದರು.
ಕಾರ್ಮಿಕ ಕಾನೂನು ತಿದ್ದುಪಡಿ ವಿರೋಧಿಸಿ ರಾಜ್ಯ ವ್ಯಾಪಿ ಹೋರಾಟದ ಭಾಗವಾಗಿ ಜಿಲ್ಲಾಧಿಕಾರಿ ಕಚೇರಿ ಚಲೊ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬಹುರಾಷ್ಟ್ರೀಯ ಕಂಪೆನಿಗಳ ಪರವಾಗಿ, ಉದ್ಯಮಿಗಳ ಪರವಾಗಿ ಕಾರ್ಮಿಕರ ಕಾಯ್ದೆಗಳನ್ನು ಬದಲಿಸಲು ಹೊರಟಿದೆ. ಇದನ್ನು ವಿರೋಧಿಸಿದರೆ ಹೋರಾಟವನ್ನು ಹತ್ತಿಕ್ಕುವ ಯತ್ನ ಮಾಡಲಾಗುತ್ತಿದೆ ಎಂದು ಅವರು ಆಕ್ರೋಶ ಹೊರ ಹಾಕಿದರು.
ಈ ದೇಶದ ಸಂಪತ್ತು ಜನರದ್ದು, ರಾಜಕೀಯ ಪಕ್ಷಗಳದ್ದಲ್ಲ. ಕೋವಿಡ್ ಸಂಕಷ್ಟಕ್ಕೆ ಸಿಲುಕಿ ಕಾರ್ಮಿಕರು ರೈತರು ಸಮಸ್ಯೆ ಎದುರಿಸುತ್ತಿರುವ ಹೊತ್ತಿನಲ್ಲಿ ಕಾರ್ಮಿಕರ ಕಾಯ್ದೆ ಕಾನೂನುಗಳನ್ನು ಬಲಗೊಳಿಸುವ ಬದಲು ದುರ್ಬಲಗೊಳಿಸಲಾಗುತ್ತಿದೆ. ಇದು ಜನರ ಪರವಾದ ಸರ್ಕಾರವೊ, ಮಾಲೀಕರ ಪರವಾದ ಸರ್ಕಾರವೊ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಕಾರ್ಮಿಕರ ಹಾಗೂ ರೈತರ ವಿರೋಧಿ ಧೋರಣೆ ಮುಂದುವರಿಸಿದರೆ ಆರ್ಥಿಕತೆ ಪಾತಾಳ ಸೇರಲಿದೆ. ಕಾರ್ಮಿಕರು, ರೈತರು ಉದ್ಯಮಿಗಳ ಗುಲಾಮರಾಗುವ ಕಾಲ ಬರಲಿದೆ. ಮುಂದಿನ ಚುನಾವಣೆಯಲ್ಲಿ ಜನರು ತಕ್ಕಪಾಠ ಕಲಿಸಬೇಕು ಎಂದರು.
ಸಿಐಟಿಯು ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಹೋರಾಟ ಮಾಡಿ ಪಡೆದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಕೈತಪ್ಪಿ ಹೋಗುವ ಆತಂಕ ಎದುರಾಗಿದೆ. ಇದರ ವಿರುದ್ಧ ಕಾರ್ಮಿಕರು ಹೋರಾಟ ಮಾಡಬೇಕು ಎಂದರು.
ಹಿಂದೆ, ಮುಷ್ಕರ ಮಾಡಲು 14 ದಿನ ನೋಟಿಸ್ ಅವಧಿಯನ್ನು ಈಗ 60 ದಿನಗಳಿಗೆ ಹೆಚ್ಚಿಸಲಾಗಿದೆ. ಕಾರ್ಮಿಕ ವಿರೋಧಿ ಕಾಯ್ದೆ ಕಾನೂನುಗಳ ವಿರುದ್ಧ ಹೋರಾಟ ತೀವ್ರಗೊಳ್ಳಬೇಕು ಎಂದು ಕರೆ ನೀಡಿದರು.
ಲಾಕ್‌ಡೌನ್ ಅವಧಿಯಲ್ಲಿ ಪೂರ್ಣ ವೇತನ ಪಾವತಿಸಬೇಕು, ಕೋವಿಡ್ ನೆಪದಲ್ಲಿ ಕಾರ್ಮಿಕರ ವಜಾ, ವೇತನ ಹೆಚ್ಚಳ ಮುಂದೂಡಿಕೆ ಕ್ರಮ ನಿರ್ಬಂಧಿಸಬೇಕು, ರಾಜ್ಯ ಸರ್ಕಾರದ ಪಾಲಿನ ಜಿಎಸ್‌ಟಿ ಪಾವತಿಸಬೇಕು, ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ಕೈಬಿಡಬೇಕು, ಆದಾಯ ತೆರಿಗೆ ವ್ಯಾಪ್ತಿಗೊಳಪಡದ ಕುಟುಂಬಗಳಿಗೆ 6 ತಿಂಗಳು ₹ 7,500 ನೀಡಬೇಕು ಎಂದು ಒತ್ತಾಯಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರ ಮೂಲಕ ಮುಖ್ಯಮಂತ್ರಿಗೆ ಬೇಡಿಕೆಗಳ ಮನವಿ ಸಲ್ಲಿಸಲಾಯಿತು.
ಸಿಐಟಿಯು ಕಾರ್ಯದರ್ಶಿ ಸುರೇಶ್ ಕಲ್ಲಾಗಾರ, ಖಜಾಂಚಿ ಶಶಿಧರ ಗೊಲ್ಲ, ಜಿಲ್ಲಾ ಕಟ್ಟಡ ಸಂಘದ ಗೌರವಾಧ್ಯಕ್ಷ ದಯಾನಂದ ಕೋಟ್ಯಾನ್, ಅಧ್ಯಕ್ಷ ಶೇಖರ್ ಬಂಗೇರ, ಖಜಾಂಚಿ ಗಣೇಶ ನಾಯ್ಕ, ರಾಮಕಾರ್ಕಡ, ಎಸ್.ಕವಿರಾಜ್, ಎಚ್.ನರಸಿಂಹ, ಮಹಾಬಲ ವಡೆಯರ ಹೋಬಳಿ, ಉಮೇಶ್ ಕುಂದರ್, ಬಲ್ಕೀಸ್, ನಳಿನಿ, ಭಾರತಿ, ಸುನಂದ, ಕಮಲ ಇದ್ದರು.