ದೇವರ ದರ್ಶನಕ್ಕೆ ಹೊರಟ ರೌಡಿ ಶೀಟರ್ ಹತ್ಯೆ: ಕಾರು ಪತ್ತೆ
ಹಿರಿಯಡ್ಕ: (ಉಡುಪಿ ಟೈಮ್ಸ್ ವರದಿ)ದೇವರಿಗೆ ಕೈಮುಗಿಯಲೆಂದು ಹೊರಟ ರೌಡಿ ಶೀಟರ್‌ನನ್ನು ತಂಡವೊಂದು ಹಾಡುಗಲೇ ತಲವಾರಿನಿಂದ ಕಡಿದು ಹತ್ಯೆ ಮಾಡಿದ ಘಟನೆಗೆ ಸಂಬಂಧಿಸಿ ಆರೋಪಿಗಳ ಬಂಧನಕ್ಕೆ ಹಿರಿಯಡ್ಕ ಪೊಲೀಸರು ಬಲೆ ಬೀಸಿದ್ದಾರೆ.
ಉಡುಪಿಯ ಹಿರಿಯ ನ್ಯಾಯಾವಾದಿಯ ಕಛೇರಿಯಿಂದಲೇ ಹಿಂಬಾಲಿಸಿ ಕೊಂಡು ಬಂದ ದುಷ್ಕರ್ಮಿಗಳು ಪಡುಬಿದ್ರೆ ಇನ್ನಾದ ರೌಡಿ ಶೀಟರ್ ಕಿಶನ್ ಹೆಗ್ಡೆ(42)ಯನ್ನು ಹಿರಿಯಡ್ಕ ಶ್ರೀವಿರಭದ್ರ ದೇವಸ್ಥಾನದ ಪಕ್ಕವೇ ಎರಡು ಕಾರಿನಲ್ಲಿ ಬಂದ ಆರೇಳು ಜನ ದುಷ್ಕರ್ಮಿಗಳು ಹತ್ಯೆಯನ್ನು ಮಾಡಿ ಪರಾರಿಯಾಗಿದ್ದಾರೆ.
ಕಿಶನ್ ಹೆಗ್ಡೆ ತನ್ನ ಸ್ನೇಹಿತ ದಿವ್ಯಾರಾಜ್ ಮತ್ತು ಸಂಬಂಧಿ ಹರಿಪ್ರಸಾದ್ ಜೊತೆ ನ್ಯಾಯಾವಾದಿ ಕಛೇರಿಯಿಂದ ಕಾರ್ಕಳ ಕಡೆ 2 ಗಂಟೆಗೆ ಹೊರಟಿದ್ದರು, ಆಗ ಸ್ನೇಹಿತ ದಿವ್ಯಾರಾಜ್ ಮಣಿಪಾಲದಲ್ಲಿ ಊಟ ಮಾಡುವ ಎಂದಿದ್ದರು. ಆಗ ಕಿಶನ್ ಇಲ್ಲಿ ಬೇಡ ನಾವು ಮೊದಲು ಹಿರಿಯಡ್ಕ ದೇವರ ದರ್ಶನವಾಗಿ ಮತ್ತೆ ಊಟ ಮಾಡುವ ಎಂದು ಹಿರಿಯಡ್ಕ ಕಡೆ ಹೊರಟಿದ್ದರು.
ಉಡುಪಿಯಿಂದಲೇ ಮನೋಜ್ ಕೋಡಿಕೆರೆ ಮತ್ತು ಆರೇಳು ಜನರಿದ್ದ ತಂಡ ಇನ್ನೋವ ಮತ್ತು ಮಾರುತಿ ರಿಡ್ಜ್ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದರು. ಮಧ್ಯಾಹ್ನ 2.25 ರ ಸುಮಾರಿಗೆ ಹಿರಿಯಡ್ಕ ತಲುಪುತ್ತಿದ್ದಂತೆ ಇನ್ನೋವಾ ಕಾರನ್ನು ಕಿಶನ್ ಕಾರಿಗೆ ಅಡ್ಡವಾಗಿ ಇಟ್ಟು, ತಕ್ಷಣ ತಲವಾರು ಹಾಗು ಸುತ್ತಿಗೆಯಲ್ಲಿ ಕಾರಿನ ಮುಂಭಾಗ ಮತ್ತು ಬಲ ಭಾಗದ ಗಾಜನ್ನು ದುಷ್ಕರ್ಮಿಗಳು ಒಡೆದಿದ್ದರು. ತಕ್ಷಣ ದಿವ್ಯಾರಾಜ್ ಮತ್ತು ಸಂಬಂಧಿ ಹರಿಪ್ರಸಾದ್ ಅಲ್ಲಿಂದ ರಕ್ಷಿಸಿಸಿಕೊಳ್ಳಲು ದೂರ ಓಡಿದ್ದರು, ನಂತರ ಕಿಶನ್ ಕೂಡ ಕಾರಿನಿಂದ ಇಳಿದು ದುಷ್ಕರ್ಮಿಗಳ ಜೊತೆ ವಾಗ್ವಾದ ನಡೆಸುತ್ತಿದ್ದಂತೆ ಹಿಂದಿನಿಂದ ತಲವಾರಿನಿಂದ ತಲೆಗೆ ಬಲವಾಗಿ ಕಡಿಯಲಾಗಿದೆಂದು ಪೊಲೀಸರು ತಿಳಿಸಿದ್ದಾರೆ.
ಒಂದೇ ಏಟಿಗೆ ಕುಸಿದ ಕಿಶನ್ ಅಲ್ಲೇ ಕುಸಿದು ಬಿದ್ದಿದ್ದ ಆತನ ಮೇಲೆ ಮತ್ತೆ ದಾಳಿ ಮಾಡಿ ತಂಡ ಅಲ್ಲಿಂದ ಕಾರಿನಲ್ಲಿ ಪರಾರಿಯಾಗಿದ್ದಾರೆ.
ಕಾರು ಪತ್ತೆ: ಹತ್ಯೆ ಮಾಡಿ ಎರಡು ಕಾರಿನೊಂದಿಗೆ ಕಾರ್ಕಳ ಕಡೆ ಹೊರಟ ದುಷ್ಕರ್ಮಿಗಳು, ಮಾರುತಿ ರಿಡ್ಜ್ ಕಾರನ್ನು ಕಣಂಜಾರು ಬಳಿ ಬಿಟ್ಟು ಇನ್ನೋವ ಕಾರಿನಲ್ಲಿ ಕಾರ್ಕಳ ಕಡೆ ಪರಾರಿಯಾಗಿರುವುದಾಗಿ ಹಿರಿಯಡ್ಕ ಪೊಲೀಸರು ತಿಳಿಸಿದ್ದಾರೆ.
ಯಾರೀ ಕಿಶನ್ ಹೆಗ್ಡೆ: ಲ್ಯಾಂಡ್ ಲಿಂಕ್ ವ್ಯವಹಾರ ನಡೆಸುತ್ತಿದ್ದ ಕಿಶನ್ ಕುಲ್ಲಕ ಕಾರಣಕ್ಕೆ ಪಡುಬಿದ್ರೆ ನವೀನ್ ಡಿಸೋಜಾ ಹತ್ಯೆ, ಮಂಗಳೂರಿನಲ್ಲಿ ಅಕ್ರಮ ಶಸ್ತಾಸ್ರ, ಬೆಂಗಳೂರಿನಲ್ಲಿ ಕೊಲೆಯತ್ನ ಪ್ರಕರಣ ಇತನ ಮೇಲಿತ್ತು.
ಲ್ಯಾಡ್ ಲಿಂಕ್ ನ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ವೈಷಮ್ಯವೇ ಹತ್ಯೆಗೆ ಕಾರಣ ವಿರಬಹುದೆಂದು ಪೊಲೀಸರು ಸಂಶಯಿಸಿದ್ದಾರೆ, ಇದೇ ದಿಕ್ಕಿನಲ್ಲಿ ತನಿಖೆ ಮುಂದುವರಿದಿದೆ.