ಸಿಎಂ ಆಯ್ಕೆ ಮಾಡೋದು, ಕೆಳಗೆ ಇಳಿಸೋದು ಗೊತ್ತು- ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿ ಪ್ರಸಾದ್ ಗುಟುರು
ಮಂಗಳೂರು: ಕಾಂಗ್ರೆಸ್ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ತಮಗೆ ಸಿಕ್ಕಿಲ್ಲ ಎಂದು ಬಹಿರಂಗವಾಗಿಯೇ ಸಿಎಂ ಸಿದ್ದರಾಮಯ್ಯ ಮೇಲೆ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.
ಮಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಈಡಿಗ, ಬಿಲ್ಲವ, ದೀವರ ಮುಖಂಡರ ಸಭೆ ನಡೆದಿತ್ತು. ಅದರಲ್ಲಿ ಹಿಂದುಳಿದ ಸಮುದಾಯಗಳ ಅಸ್ತ್ರವನ್ನು ಸಿಎಂ ಸಿದ್ದರಾಮಯ್ಯ ಮೇಲೆ ಹರಿಪ್ರಸಾದ್ ಬಿಟ್ಟಿದ್ದಾರೆ.ನನಗೆ ಸಿಎಂ ಆಯ್ಕೆ ಮಾಡೋದು ಗೊತ್ತು, ಕೆಳಗೆ ಇಳಿಸೋದು ಗೊತ್ತಿದೆ. ನಾನು ಯಾರ ಬಳಿಯೂ ಭಿಕ್ಷೆ ಬೇಡುವುದಿಲ್ಲ, ಎದೆ ಕೊಟ್ಟು ನಿಲ್ಲುತ್ತೇನೆ. ನಾನು ಮಂತ್ರಿ ಆಗೋದು ಬಿಡೋದು ಬೇರೆ ಪ್ರಶ್ನೆ. ಐವರನ್ನು ಸಿಎಂ ಆಯ್ಕೆ ಮಾಡುವುದರಲ್ಲಿ ನಾನು ಪಾತ್ರವಹಿಸಿದ್ದೇನೆ, ಸಮುದಾಯಕ್ಕೆ ನೀವೇನು ಕೊಟ್ಟಿದ್ದೀರಿ ಎಂದು ಬಹಿರಂಗವಾಗಿಯೇ ಸಿಎಂ ಸಿದ್ದರಾಮಯ್ಯ ಹೆಸರು ಹೇಳಿ ತಮ್ಮ ಅಸಮಾಧಾನ, ಆಕ್ರೋಶ, ಸಿಟ್ಟನ್ನು ಹೊರಹಾಕಿದ್ದಾರೆ.
ಕರ್ನಾಟಕದಲ್ಲಿ ರಾಜಕೀಯವಾಗಿ ಈ ಸಮುದಾಯದವರು ಮುಂದೆ ಬರುತ್ತಿಲ್ಲ. ಏನೇ ಪ್ರಯತ್ನ ಮಾಡಿದರೂ ಆಗುತ್ತಿಲ್ಲ. ಅವಕಾಶ ವಂಚಿತರಾಗುತ್ತಿರುವುದು ನೋಡಿದರೆ ಯಾರದ್ದೋ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದೇವೆ ಅನಿಸುತ್ತದೆ. ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಕ್ಕೆ ಸೇರಿದವರು. ಎಲ್ಲರ ಒಟ್ಟಿಗೆ ಸೇರಬೇಕು ಎಂದು ನಾವು 2013 ರಲ್ಲಿ ಬೆಂಬಲ ಅವರಿಗೆ ಬೆಂಬಲ ಕೊಟ್ಟು ಮುಖ್ಯಮಂತ್ರಿಯಾದರು. ಆ ಬಳಿಕ ನಾವು ಕಾಂಗ್ರೆಸ್ ಆಗಲಿ, ಮಂತ್ರಿಗಳಾಗಲಿ ಯಾರ ಬಳಿಯೂ ಕೈ ಚಾಚುವುದಿಲ್ಲ. ಹಿಂದುಳಿದ ವರ್ಗಕ್ಕೆ ಯಾವ ರೀತಿ ಅನುಕೂಲ ಮಾಡಬೇಕು ಎಂದ ಯೋಚನೆ ಮಾಡುತ್ತೇವೆ. ಸ್ವಾರ್ಥಕ್ಕೆ ಯಾವುದು ಕೇಳಲ್ಲ ಎಂದು ಕಿಡಿಕಾರಿದ್ದಾರೆ.
ಕಾರ್ಕಳದ ಕೋಟಿ ಚನ್ನಯ್ಯ ಪಾರ್ಕ್‌ಗೆ 5 ಕೋಟಿ ಕೊಡಿ ಎಂದು ಕೇಳಿದ್ದೆವು. ಸಿದ್ದರಾಮಯ್ಯ ಕೊಡುತ್ತೇವೆ ಎಂದು ಹೇಳಿದವರು ಇದುವರೆಗೆ ಕೊಟ್ಟಿಲ್ಲ. ನನಗೆ ಅವರು ರಾಜಕೀಯವಾಗಿ ಏನು ಸಹಾಯ ಮಾಡಲು ಆಗಲ್ಲ. ನಾನೇ ಅವರಿಗೆ ಸಹಾಯ ಮಾಡುತ್ತೇನೆ. ಮಂಗಳೂರು ವಿವಿಯಲ್ಲಿ ಗುರುಪೀಠ ಸ್ಥಾಪನೆಗೆ ನಾನು ಎಂಪಿ ಆದಾಗ ಹಣ ಕೊಟ್ಟಿದೆ. ಕಟ್ಟಡ ಅರ್ಧಕ್ಕೆ ನಿಂತಿದೆ ಹಣ ಕೊಟ್ಟಿಲ್ಲ, ಆದರೆ ಅವರ ಸಮಾಜಕ್ಕೆ ಎಷ್ಟು ಕೊಟ್ಟಿದ್ದಾರೆ ಎಂದು ಸ್ವಾಮೀಜಿಗಳು ನೋಡಲಿ. ಹಿಂದುಳಿದ ವರ್ಗ ಎಂದರೆ ಒಂದು ಜಾತಿ ಮಾತ್ರವಲ್ಲ. ಜಾತಿ ಬೇರೆ, ವರ್ಗ ಬೇರೆ, ನಾವು ವರ್ಗದಲ್ಲಿ ಬರುತ್ತೇವೆ. ವರ್ಗದಲ್ಲಿ ಬರುವ ಎಲ್ಲರಿಗೂ ಸಮಾನ ಹಕ್ಕು ಪಡೆಯಬೇಕು. 11 ಕ್ಷೇತ್ರಗಳಲ್ಲಿ ಈಡಿಗ, ಬಿಲ್ಲವ, ದೀವರು ನಿರ್ಣಯಕವಾಗಿದ್ದೇವೆ. ನಾನು ಸಹ ಎಲೆಕ್ಷನ್ ಕಮಿಟಿಯಲ್ಲಿ ಇದ್ದೆ, 4 ಜನ ಟಿಕೆಟ್ ವಂಚಿತರಾದರು. 2 ಬಿಲ್ಲವ, 1ಈಡಿಗ, 1ದೀವರು ಟಿಕೆಟ್ ಗಿಟ್ಟಿಸಿಕೊಳ್ಳಲಿಲ್ಲ.
ಮಂಗಳೂರು ಉತ್ತರ ಮತ್ತು ದಕ್ಷಿಣದಲ್ಲಿ ಅಲ್ಪಸಂಖ್ಯಾತರಿಗೆ ಕೊಟ್ಟಿದ್ದಾರೆ. ನಾವು ಅಲ್ಪಸಂಖ್ಯಾತರ ವಿರೋಧಿಗಳಲ್ಲ. ನೀವು ಮುಂದೆ ಬರಬೇಕಾದರೆ ಅಲ್ಪಸಂಖ್ಯಾತರ ವಿರುದ್ಧ ಧ್ವನಿ ಎತ್ತಬಾರದು. ಅಲ್ಪಸಂಖ್ಯಾತರನ್ನು ಮುಂದಿಟ್ಟು ನಮಗೆ ಟಿಕೆಟ್ ವಂಚಿತರನ್ನಾಗಿ ಮಾಡುತ್ತಾರೆ. ಲಿಂಗಾಯತರು, ಒಕ್ಕಲಿಗರು, ಬ್ರಾಹ್ಮಣರು, ಕುರುಬರು ಸಿಎಂ ಸ್ಥಾನಕ್ಕೆ ಹೋರಾಟ ಮಾಡ್ತಾರೆ. ಅವರು ಅಧಿಕಾರಕ್ಕೆ ಬರಬೇಕಾದರೆ ಅವರ ಸ್ಥಾನಗಳನ್ನು ಬಿಟ್ಟುಕೊಡಲಿ. ನಮ್ಮನ್ನು ಯಾಕೆ ಕಟ್ ಮಾಡ್ತಾರೆ, ನಾವು ಹೆಚ್ಚು ಇರುವ ಜಾಗದಲ್ಲಿ ಅವಕಾಶ ಕೊಡಬೇಕು. ನಾವೇನು ಮಂಡ್ಯ, ಬೆಳಗಾವಿಯಲ್ಲಿ ಕೊಡಿ ಎಂದು ಕೇಳಲ್ಲ. ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡುಗು ಕಡೆ ನಮ್ಮವರು ನಿರ್ಣಾಯಕ ಎಂದು ರಾಜಕೀಯದ ಕಟು ವಾಸ್ತವವನ್ನು ಬಿ ಕೆ ಹರಿಪ್ರಸಾದ್ ಸಭೆಯಲ್ಲಿ ಎಲ್ಲರ ಮುಂದಿಟ್ಟರು.