ಕುವೈಟ್: ಮಾಲಕನ ಅವಾಂತರ, ತೊಂದರೆಗೆ ಸಿಲುಕಿದ್ದ ಮಹಿಳೆ ಸ್ವದೇಶಕ್ಕೆ
ಉಡುಪಿ: ಕುವೈಟ್‌ನಿಂದ ಬೆಂಗಳೂರಿಗೆ ಹೊರಟಾಗ ತೊಂದರೆಗೊಳಗಾದ ಉಡುಪಿಯ ಗಿರಿಜಾ ಅವರು ಬುಧವಾರ ಬೆಂಗಳೂರಿಗೆ ಕುವೈಟ್ ಏರ್ವೇಸ್‌ನಲ್ಲಿ ಬಂದಿಳಿದರು.
ಗಿರಿಜಾ ಕುವೈಟ್ ವಿಮಾನ ನಿಲ್ದಾಣಕ್ಕೆ ಸೆ. 12ರಂದು ಬಂದಾಗ ಅಲ್ಲಿನ ಆಕೆಯ ಮಾಲಕ ಮಾಡಿದ ಅವಾಂತರದಿಂದಾಗಿ ಪೊಲೀಸರ ವಶವಾಗಿದ್ದರು. ಆತ ಗಿರಿಜಾ ನಾಪತ್ತೆಯಾಗಿದ್ದಾರೆಂದು ದೂರು ಕೊಟ್ಟಿದ್ದ.
ಮಾಹಿತಿ ತಿಳಿದ ಮಂಗಳೂರು ಮತ್ತು ಉಡುಪಿಯ ಕುವೈಟ್‌ನಲ್ಲಿರುವ ಸಂಘಟನೆ ಮತ್ತು ಉದ್ಯಮಿಗಳ ಸತತ ಪರಿಶ್ರಮದಿಂದ ಗಿರಿಜಾ ಕ್ಷೇಮವಾಗಿ ಮರಳುವಂತಾಗಿದೆ.
ಬಹ್ರೈನ್ ಉದ್ಯಮಿ ಕೆಂಜೂರು ಶಶಿಧರ ಶೆಟ್ಟಿ, ಕುವೈಟ್ ತುಳುಕೂಟದ ಮಾಜಿ ಅಧ್ಯಕ್ಷ ವಿಲ್ಸನ್ ಡಿ’ಸೋಜಾ ಕುವೈಟ್ ಬಂಟರ ಸಂಘದ ಮಾಜಿ ಅಧ್ಯಕ್ಷ ಡಾ. ಶೇಖರ ಶೆಟ್ಟಿ, ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಶನ್ ಕರ್ನಾಟಕ ಶಾಖೆಯ ಬಂಟ್ವಾಳದ ಅಬ್ದುಲ್ ಲತೀಫ್, ಕುವೈಟ್‌ನಲ್ಲಿರುವ ನೂತನ ರಾಯಭಾರಿ ಶಿಬಿ ಜಾರ್ಜ್, ಅನಿವಾಸಿ ಭಾರತೀಯ ವೇದಿಕೆ ಮಾಜಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರ ನೆರವಿನಿಂದ ಗಿರಿಜಾ ಅವರ ಸಮಸ್ಯೆಗಳು ಪರಿಹಾರವಾದವು ಎಂದು ತಿಳಿದುಬಂದಿದೆ.