ಮಣಿಪುರ ಮಹಿಳೆಯರನ್ನು ನಗ್ನಗೊಳಿಸಿ ಮೆರವಣಿಗೆ: ಸ್ವಯಂ ಪ್ರೇರಿತ ಪ್ರಕರಣ ಕೈಗೆತ್ತಿಕೊಂಡ ಸುಪ್ರೀಂ
ಹೊಸದಿಲ್ಲಿ: ಕುಕಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಇಬ್ಬರು ಮಣಿಪುರಿ ಮಹಿಳೆಯರನ್ನು ನಗ್ನವಾಗಿ ಮೆರವಣಿಗೆ ಮಾಡಿದ್ದೇ ಅಲ್ಲದೆ ಅವರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆಯ ಆಘಾತಕಾರಿ ವೀಡಿಯೋ ಹರಿದಾಡುತ್ತಿರುವ ಬೆನ್ನಿಗೇ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ಇಂದು ಸ್ವಯಂಪ್ರೇರಿತವಾಗಿ ಗಣನೆಗೆ ತೆಗೆದುಕೊಂಡಿದೆ.
ಈ ವೀಡಿಯೋ ತೀವ್ರ ಕಳವಳಕ್ಕೆ ಕಾರಣವಾಗಿದೆ ಹಾಗೂ ಸರ್ಕಾರ ಕ್ರಮಕೈಗೊಳ್ಳದೇ ಇದ್ದರೆ ನ್ಯಾಯಾಲಯವೇ ಕ್ರಮಕೈಗೊಳ್ಳಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದ್ದಾರೆ.
“ಇದು ಅಸ್ವೀಕಾರಾರ್ಹ. ಮತೀಯ ಸಂಘರ್ಷಗಳು ನಡೆಯುತ್ತಿರುವ ಸ್ಥಳಗಳಲ್ಲಿ ಮಹಿಳೆಯರನ್ನು ಸಾಧನವಾಗಿ ಬಳಸಲಾಗುತ್ತಿದೆ. ಇದು ಸಂವಿಧಾನದ ನಿಂದನೆ. ಈ ವೀಡಿಯೋಗಳು ಆಘಾತಕಾರಿ,” ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.
ಈ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಸರಕಾರ ತೆಗೆದುಕೊಂಡ ಹೆಜ್ಜೆಗಳ ಕುರಿತಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಮನೋಜ್ ಮಿಶ್ರಾ ಅವರನ್ನೂ ಒಳಗೊಂಡಿರುವ ಪೀಠ ಪ್ರತಿಕ್ರಿಯೆ ಕೇಳಿದೆ.
“ಇಂತಹ ಘಟನೆಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳಬೇಕಾಗಿರುವುದರಿಂದ ಸರ್ಕಾರಗಳು ಈ ಕುರಿತು ಮಾಹಿತಿ ನೀಡಬೇಕು. ಈ ಘಟನೆ ಸಂವಿಧಾನಿಕ ಪ್ರಜಾಸತ್ತೆಯ ಉಲ್ಲಂಘನೆಯಾಗಿದೆ,” ಎಂದು ನ್ಯಾಯಾಲಯ ಹೇಳಿದೆ.
ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ. “ಇದು ಅಸ್ವೀಕಾರಾರ್ಹ ಮತ್ತು ನಾವೂ ನಿಮ್ಮ ಜೊತೆಗಿದ್ದೇವೆ,” ಎಂದು ಅವರು ಹೇಳಿದರು.
ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 28ಕ್ಕೆ ನಿಗದಿಪಡಿಸಲಾಗಿದೆ.