ಹೆಚ್ಚಿದ ಕೊರೊನಾ ಪ್ರಕರಣ: 2 ದಿನ ಲಾಕ್ಡೌನ್ – ರಾಜ್ಯಗಳ ಸಲಹೆ ಕೇಳಿದ ಮೋದಿ
ನವದೆಹಲಿ: ಕೋವಿಡ್ 19 ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತೆ ಲಾಕ್ಡೌನ್ ವಿಚಾರವನ್ನು ಏಳು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ಸಭೆಯಲ್ಲಿ ಸಲಹೆ ಕೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೋವಿಡ್ 19 ಹೆಚ್ಚು ಸೋಂಕು ಇರುವ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ನವದೆಹಲಿ, ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಒಟ್ಟು ಏಳು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಲಾಕ್ ಡೌನ್ ಬಗ್ಗೆ ಪ್ರಸ್ತಾಪ ಮಾಡಿ ಸಲಹೆ ಕೇಳಿದ್ದಾರೆ.
2 ದಿನ ಲಾಕ್ ಡೌನ್ ಮಾಡಿದ್ರೆ ಪರಿಣಾಮಕಾರಿಯಾಗುತ್ತಾ, ಈ ಬಗ್ಗೆ ಸರ್ಕಾರಗಳು ಪರಾಮರ್ಶೆ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ. ಇದರ ಜೊತೆಯಲ್ಲಿ ಮೈಕ್ರೋ ಕಂಟೆನ್ಮೆಂಟ್ ವಲಯಗಳ ಬಗ್ಗೆ ಗಮನ ನೀಡಿ. ಲಾಕ್ಡೌನ್ ಜಾರಿ ಮಾಡಿದರೆ ಆರ್ಥಿಕತೆಗೆ ಪೆಟ್ಟು ಬೀಳದಂತೆ ನೋಡಿಕೊಳ್ಳಬೇಕು. ಮುಂದಿನ 7 ದಿನ ಸಿಎಂಗಳು ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಸಭೆ ನಡೆಸಬೇಕೆಂದು ಸೂಚಿಸಿದ್ದಾರೆ.
ಕೊರೊನಾ ಸೋಂಕಿತರ ಸಂಖ್ಯೆ ಜಾಸ್ತಿಯಾದರೆ ಮೋದಿ ಸೂಚನೆಯಂತೆ ರಾಜ್ಯ ಸರ್ಕಾರಗಳು ಮತ್ತೆ ಲಾಕ್ಡೌನ್ ಮಾಡಬಹುದು. ಎರಡು ದಿನ ಲಾಕ್ ಡೌನ್ ಅಂದರೆ ಶನಿವಾರ, ಭಾನುವಾರ ಲಾಕ್ಡೌನ್ ಮಾಡಬಹುದು. ಅಧಿವೇಶನದ ಬಳಿಕ ಸರ್ಕಾರ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಈ ಹಿಂದೆ ಕರ್ನಾಟಕದಲ್ಲಿ ಅನ್ಲಾಕ್ 2 ಸಮಯದಲ್ಲಿ ವೀಕೆಂಡ್ ಲಾಕ್ಡೌನ್ ಜಾರಿಯಾಗಿತ್ತು.
ಪರೀಕ್ಷೆ ಕೆಟ್ಟದಲ್ಲ
ಜನರಲ್ಲಿ ಕೊರೊನಾ ಪರೀಕ್ಷೆ ಬಗ್ಗೆ ತಪ್ಪು ಅಭಿಪ್ರಾಯಗಳಿವೆ. ಕೆಲವರು ಕೊರೊನಾದ ತೀವ್ರತೆಯನ್ನೇ ತಪ್ಪಾಗಿ ಗ್ರಹಿಸಿದ್ದಾರೆ. ಯಾವುದೇ ಕಾರಣಕ್ಕೂ ಕೊರೊನಾವನ್ನು ಲಘುವಾಗಿ ಪರಿಗಣಿಸಬಾರದು ಎಂದು ಹೇಳಿದರು. ಹೆಚ್ಚು ಪರೀಕ್ಷೆ ನಡೆಸುವಂತೆ ಕರೆ ನೀಡಿದರು. ಸಭೆಯಲ್ಲಿ ಭಾಗಿಯಾಗಿದ್ದ ಸಿಎಂ ಬಿಎಸ್ವೈ, ಕರ್ನಾಟಕದಲ್ಲಿ ಪರೀಕ್ಷೆ ಹೆಚ್ಚಿಸಲಾಗಿದೆ. ಪಾಸಿಟಿವ್ ಬಂದಿರುವ ಪ್ರಕರಣದಲ್ಲಿ ರೋಗ ಲಕ್ಷಣವಿದ್ದವರನ್ನು ತತ್ಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ. 24 ತಾಸುಗಳಲ್ಲಿ ಎಲ್ಲ ಪಾಸಿಟಿವ್ ಪ್ರಕರಣಗಳ ಸಂಪರ್ಕಿತರನ್ನು ಗುರುತಿಸಲು ಮತ್ತು 48 ತಾಸುಗಳೊಳಗೆ ಕ್ವಾರಂಟೈನ್ ಮಾಡುವ ಗುರಿ ಇದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ.ರಮಣರೆಡ್ಡಿ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.