ಮೊದಲು ವಿಮಾನದಲ್ಲಿ ಸರಿಯಾಗಿ ಕೂರಲು ಕಲಿಯಿರಿ- ತೇಜಸ್ವಿ ಸೂರ್ಯಗೆ ಪ್ರಿಯಾಂಕ್ ಖರ್ಗೆ ಟ್ವೀಟ್
ಬೆಂಗಳೂರು, ಜು.19: ”ಕರ್ನಾಟಕ ಅಥವಾ ನನ್ನ ಇಲಾಖೆ ಬಗ್ಗೆ ಚಿಂತಿಸಬೇಡಿ, ಅದು ಸುರಕ್ಷಿತರ ಕೈಯಲ್ಲಿದೆ. ನೀವು ಮೊದಲು ವಿಮಾನದಲ್ಲಿ ಸರಿಯಾಗಿ ಕೂರಲು ಕಲಿಯಿರಿ” ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಂಸದ ತೇಜಸ್ವಿ ಸೂರ್ಯಗೆ ತಿರುಗೇಟು ನೀಡಿದ್ದಾರೆ.
ರಾಹುಲ್ ಗಾಂಧಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದ್ದು, ಈ ವಿಚಾರವಾಗಿ ಟ್ವೀಟ್ ಮಾಡಿದ್ದ ತೇಜಸ್ವಿ ಸೂರ್ಯ, ”ಕನಿಷ್ಠ ಈಗಲಾದರೂ ತಮ್ಮ ಸೇಡಿನ ರಾಜಕಾರಣವನ್ನು ನಿಲ್ಲಿಸಿ. ನಿಮ್ಮ ಸಚಿವ ಸ್ಥಾನದ ಮೇಲೆ ಗಮನ ಹರಿಸಿ” ಎಂದು ಪ್ರಿಯಾಂಕ್ ಖರ್ಗೆಯವರಿಗೆ ಟ್ಯಾಗ್ ಮಾಡಿದ್ದರು.
ಪ್ರಿಯಾಂಕ್ ಖರ್ಗೆ ಟ್ವೀಟ್ ಹೀಗಿದೆ…
”ಪ್ರೀತಿಯ ತೇಜಸ್ವಿ ಸೂರ್ಯ ಅವರೇ, ಕರ್ನಾಟಕ ಅಥವಾ ನನ್ನ ಇಲಾಖೆಗಳ ಬಗ್ಗೆ ಚಿಂತಿಸಬೇಡಿ, ಅದು ಸುರಕ್ಷಿತ ಕೈಯಲ್ಲಿದೆ. ನೀವು ತಪ್ಪು ಮಾಹಿತಿ ಹರಡಿದರೆ ನಿಮ್ಮ ಸಹೋದ್ಯೋಗಿಗಳು ಮತ್ತು ನೀವು ದೇಶದ ಕಾನೂನನ್ನು ಎದುರಿಸಬೇಕಾಗುತ್ತದೆ. ಕಾಂಗ್ರೆಸ್ ಸರ್ಕಾರದ ‘ರಾಜಕೀಯ ಸೇಡಿನ’ ವಿರುದ್ಧ ನೆರವು ಪಡೆಯಲು ನಿಮ್ಮ “ಸಹಾಯವಾಣಿ”ಗೆ ಎಷ್ಟು ಜನರು ಕರೆ ಮಾಡಿದ್ದಾರೆ ಎಂಬುದನ್ನು ದಯವಿಟ್ಟು ರಾಜ್ಯಕ್ಕೆ ತಿಳಿಸುವಿರಾ?” ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ನೀವು ರಾಜ್ಯಕ್ಕಾಗಿ ಮಾಡಬೇಕಾಗಿರುವ ಪ್ರಮುಖ ವಿಷಯಗಳೇನಂದರೆ, ನಮಗೆ (ಕರ್ನಾಟಕ) ನೀಡಬೇಕಾದ ಹಣವನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರವನ್ನು ಕೇಳಿ, ಇಲ್ಲಿ ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿ, ಮತ್ತು ವಿಮಾನದಲ್ಲಿ ಇನ್ನೂ ಕುಳಿತುಕೊಳ್ಳಲು ಕಲಿಯಿರಿ” ಎಂದು ಕಾಲೆಳೆದಿದ್ದಾರೆ.