ಜಿ.ಪಂ.ಅಧ್ಯಕ್ಷರ ಕೈಗಾರಿಕಾ ಭೂ ಪರಿವರ್ತನೆ ಆದೇಶಕ್ಕೆ ಹೈಕೋರ್ಟ್ ಶಾಶ್ವತ ತಡೆಯಾಜ್ಞೆ
ಉಡುಪಿ: ಜಿಲ್ಲಾ ಪಂಚಾಯತ್ ಅಧ್ಯಕ್ಷರು ಉದ್ಯಾವರದಲ್ಲಿ ಕೈಗಾರಿಕಾ ಸ್ಥಾಪನೆಗಾಗಿ ಕೈಗಾರಿಕಾ ಭೂ ಪರಿವರ್ತನೆಗೆ ನೀಡಿದ ಆದೇಶಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ಶಾಶ್ವತ ತಡೆಯಾಜ್ಞೆ ನೀಡಿದೆಂದು ಕಾಪು ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ತಿಳಿಸಿದ್ದಾರೆ.
ಬುಧವಾರ ಪ್ರೆಸ್ ಕ್ಲಬ್ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಪು ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ, ಇದು ಪರಿಸರ ರಕ್ಷಣಾ ಸಮಿತಿಗೆ ಸಿಕ್ಕಿದ ಜಯ, ಉದ್ಯಾವರದಲ್ಲಿ ಈಗಾಗಲೇ ಮೂರು ಮೀನುಗಾರಿಕಾ ಉತ್ಪನ್ನಗಳ ಕೈಗಾರಿಕಾ ಕಾರ್ಯಗಳು ಕಾರ್ಯ ನಿರ್ವಹಿಸುತ್ತಿದೆ , ಇದೀಗ ಆದರೆ ಕೈಗಾರಿಕಾ ಸ್ಥಾಪನೆಗೆ ಕೈಗಾರಿಕಾ ಭೂ ಪರಿವರ್ತನೆಗೆ ಜನವರಿ 31, 2020ರಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಏಕಾಏಕಿಯಾಗಿ ಆದೇಶ ನೀಡಿದ್ದರು. ಮೀನುಗಾರಿಕಾ ಕೈಗಾರಿಕೆಯಿಂದ ಹೊರಬಿಡುವ ತ್ಯಾಜ್ಯಗಳಿಂದ ಸ್ಥಳೀಯ ಪ್ರದೇಶದಲ್ಲಿ ಜನ ಜೀವನದ ಮೇಲೆ ದುಷ್ಪರಿಣಾಮ ಉಂಟಾಗಿದ್ದನ್ನು ಗಮನಿಸಿ ಉದ್ಯಾವರ ಗ್ರಾಮ ಪಂಚಾಯತ್ ಪರವಾನಿಗೆ ರದ್ದು ಮಾಡಿತ್ತು.
ಇದರ ಮಧ್ಯೆ ಓರ್ವ ಉದ್ಯಮಿ ಮತ್ತೆ ಹೊಸ ಮೀನುಗಾರಿಕಾ ಉತ್ಪನ್ನಗಳ ಕೈಗಾರಿಕೆ ಸ್ಥಾಪಿಸಲು ಕೃಷಿ ಭೂಮಿಯನ್ನು ಕೈಗಾರಿಕಾ ಭೂಮಿಯಾಗಿ ಪರಿವರ್ತಿಸಲು 2017ರಲ್ಲಿ ಅರ್ಜಿ ಬಂದಿತ್ತು. ಆದರೆ ಈ ವಿಚಾರ ಸ್ಥಳೀಯ ಗ್ರಾಮ ಪಂಚಾಯತ್ ಸಭೆಯಲ್ಲಿ ಚರ್ಚೆಗೆ ಬಂದು, ಬಹುಮತ ಇಲ್ಲದೆಯೂ ಎನ್‌ಒಸಿ ನೀಡಲು ನಿರ್ಣಯವಾಯಿತು.ಆದರೆ ಇದರಿಂದ ಆಗಬಹುದಾದ ದುಷ್ಪರಿಣಾಮವನ್ನು ಚರ್ಚಿಸಿ ಮೊದಲಿನ ಗ್ರಾಮ ಪಂಚಾಯತ್ ತೀರ್ಮಾನವನ್ನು ರದ್ದುಗೊಳಿಸಿತ್ತು. ಮುಂದೆ ಉದ್ಯಾವರದಲ್ಲಿ ಯಾವುದೇ ಕೈಗಾರಿಕಾ ವಲಯಕ್ಕೆ ಅನುಮತಿ ನೀಡಬಾರದಾಗಿ ತೀರ್ಮಾನಿಸಲಾಗಿತ್ತು.
ತಾಲೂಕು ಪಂಚಾಯತ್ ವಿರೋಧದ ನಡುವೆಯೂ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಕೈಗಾರಿಕಾ ವಲಯ ಭೂ ಪರಿವರ್ತನೆಗೆ ಆದೇಶ ನೀಡಿದರು. ಉಡುಪಿ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಅದ್ಯಕ್ಷರ ಆದೇಶದ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಉದ್ಯಾವರ ಗ್ರಾಮ ಪಂಚಾಯತ್ ಅದ್ಯಕ್ಷೆ ಸುಗಂಧಿ ಶೇಖರ್ ಅವರು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಉದ್ಯಾವರ ಗ್ರಾಮದ ಹಿತದೃಷ್ಟಿಯಿಂದ ವೈಯಕ್ತಿಕ ವ್ಯಾಜ್ಯ ದಾಖಲಿಸಿದರು. ಗ್ರಾಮ ಪಂಚಾಯತ್ , ಪಿಡಿಒ ಹೆಸರಿನಲ್ಲಿಯೂ ವ್ಯಾಜ್ಯ ದಾಖಲಿಸಿತು. ಇವೆರಡನ್ನೂ ಗಮನಿಸಿದ ರಾಜ್ಯ ಉಚ್ಚ ನ್ಯಾಯಾಲಯವು ಅಗಸ್ಟ್ 3, 2020ಕ್ಕೆ ಜಿಲ್ಲಾಧ್ಯಕ್ಷರು ನೀಡಿದ ಆದೇಶಕ್ಕೆ ಶಾಶ್ವತ ತಡೆಯಾಜ್ಞೆ ಆದೇಶವನ್ನು ನೀಡಿದೆ. ಇದು ಪರಿಸರ ರಕ್ಷಣಾ ಸಮಿತಿ, ಉದ್ಯಾವರ, ಗ್ರಾಮ ಪಂಚಾಯತ್ ಹೋರಾಟಕ್ಕೆ ಸಿಕ್ಕ ಜಯ ಎಂದು ಸೊರಕೆ ತಿಳಿಸಿದ್ದಾರೆ.
ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಸುಗಂಧಿ ಶೇಖರ್, ಪರಿಸರ ರಕ್ಷಣಾ ಸಮಿತಿ ಅಧ್ಯಕ್ಷ ಆನಂದ್, ಲಾರೆನ್ಸ್ ಡಿಸೋಜ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಗಿರೀಶ್, ದಿವಾಕರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.