ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಿದ ಚುನಾವಣಾ ಆಯೋಗ
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಸೊಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಸದಿರಲು ರಾಜ್ಯ ಚುನಾವಣಾ ಆಯೋಗ ತೀರ್ಮಾನಿಸಿದೆ.
ಚುನಾವಣೆ ನಡೆಸಲು ಸಾಧ್ಯವೇ ಇಲ್ಲವೆ ಎನ್ನುವ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಿದ ನಂತರ ಈ ನಿರ್ಧಾರ ಕೈಗೊಂಡಿದೆ. ಚುನಾವಣೆ ನಡೆದರೆ ಸೋಂಕು ಮತ್ತಷ್ಟು ಹರಡಲಿದೆ ಎನ್ನುವ ನಿಲುವಿಗೆ ಬಂದಿರುವ ಆಯೋಗ, ಈಗಿನ ಸನ್ನಿವೇಶವನ್ನು ಅಸಾಧಾರಣ ಪರಿಸ್ಥಿತಿ ಎಂದು ಪರಿಗಣಿಸಿ ಸಂವಿಧಾನದ ಪರಿಚ್ಛೇದ 243-ಕೆ ಅಡಿ ತನಗಿರುವ ಅಧಿಕಾರ ಬಳಸಿ ತಾತ್ಕಾಲಿಕವಾಗಿ ಚುನಾವಣೆ ಮುಂದೂಡಿದೆ.
ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಗ್ರಾಮ ಪಂಚಾಯತ್ ಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸುವ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.
ಈಗ ಚುನಾವಣೆ ನಡೆಸಲು ಸಿಬ್ಬಂದಿಗಳ ಕೊರತೆ, ಸಾರಿಗೆ ವ್ಯವಸ್ಥೆ ಕೊರತೆ ಮತ್ತು ಕಾನೂನು ಸುವ್ಯವಸ್ಥೆಯ ತೊಂದರೆಯುಂಟಾಗಬಹುದು ಎಂದು ಜಿಲ್ಲಾಧಿಕಾರಿಗಳು ವರದಿ ನೀಡಿದ್ದಾರೆ. ಅಲ್ಲದೆ ಚುನಾವಣೆ ನಡೆಸುವುದರಿಂದ ಜನರ ಆರೋಗ್ಯ ರಕ್ಷಣೆಗೂ ತೊಂದರೆಯುಂಟಾಗಬಹುದು ಎಂದು ವರದಿಯಲ್ಲಿ ಹೇಳಲಾಗಿದೆ ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯದ 6,025 ಗ್ರಾಮ ಪಂಚಾಯತ್‌ಗಳ ಪೈಕಿ 5,800 ಪಂಚಾಯತ್‌ಗಳ ಅವಧಿ ಜೂನ್‌ನಿಂದ ಆಗಸ್ಟ್ ನಡುವೆ ಅಂತ್ಯವಾಗಲಿದೆ. ಈ ಪಂಚಾಯತ್‌ಗಳಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಅಗತ್ಯ ಸಿದ್ಧತೆಗಳನ್ನೂ ಆರಂಭಿಸಿತ್ತು. ಆದರೆ ಕೊರೋನಾ ಹಿನ್ನೆಲೆಯಲ್ಲಿ ಸಿದ್ಧತೆಗಳನ್ನು ಸ್ಥಗಿತಗೊಳಿಸಲಾಗಿದೆ.