ಬೆಂಗಳೂರಿನಲ್ಲಿ ಬಂಧಿತರಾದ ಐವರು ಶಂಕಿತ ಉಗ್ರರು 7 ದಿನ ಸಿಸಿಬಿ ಕಸ್ಟಡಿಗೆ
ಬೆಂಗಳೂರು: ಬೆಂಗಳೂರಿನಲ್ಲಿ ಬಂಧಿಸಲಾಗಿದ್ದ ಐವರು ಶಂಕಿತ ಉಗ್ರರನ್ನು 7 ದಿನಗಳ ಕಾಲ ಸಿಸಿಬಿ ಪೊಲೀಸರ ಕಸ್ಟಡಿಗೆ ನೀಡಲಾಗಿದೆ.
ಬಂಧಿತ ಸಯ್ಯದ್ ಸುಹೇಲ್, ಉಮರ್, ಜುನೇದ್ ಮುದಾಶೀರ್, ಜಾಹಿದ್ ನನ್ನು ಇಂದು ಸಿಸಿಬಿ ಕೋರ್ಟ್ ಗೆ ಹಾಜರುಪಡಿಸಿದ್ದು 15 ದಿನಗಳ ಕಸ್ಟಡಿಗೆ ನೀಡುವಂತೆ ಮನವಿ ಮಾಡಿತ್ತು. ಆದರೆ ನ್ಯಾಯಾಲಯ 7 ದಿನಗಳ ಕಾಲ ಕಸ್ಟಡಿಗೆ ನೀಡಿದೆ. ಬಂಧಿತ ಶಂತಕ ಉಗ್ರರು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. 2017ರ ಅಕ್ಟೋಬರ್ನಲ್ಲಿ ಬೆಂಗಳೂರಿನ ಆರ್.ಟಿ.ನಗರದಲ್ಲಿ ನಡೆದಿದ್ದ ಮೂವರ ಕಿಡ್ನ್ಯಾಪ್, ಓರ್ವನ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಹಲವು ಆರೋಪಿಗಳು, ಪರಪ್ಪನ ಅಗ್ರಹಾರ ಜೈಲಿನಿಂದ ಉಗ್ರರ ಜೊತೆಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದ್ದು, ಈ ಬಗ್ಗೆ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಸಿಸಿಬಿಯು ನಗರದ ವಿವಿಧ ಪ್ರದೇಶಗಳಿಂದ ಐವರು ಶಂಕಿತ ಭಯೋತ್ಪಾದಕರನ್ನು ಬಂಧಿಸಿ ಅವರಿಂದ ಅನೇಕ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದೆ. ಆರೋಪಿಗಳು ಕೊಲೆ, ದರೋಡೆ, ಕೆಂಪು ಮರಳು ಕಳ್ಳಸಾಗಣೆ ಮತ್ತು ಇತರ ಅಪರಾಧಗಳ ಆರೋಪಿಗಳಾಗಿದ್ದಾರೆ. ಅವರು ಜೈಲಿನಲ್ಲಿದ್ದ ಇತರ ಭಯೋತ್ಪಾದಕ ಆರೋಪಿಗಳೊಂದಿಗೆ ಸಂಪರ್ಕದಲ್ಲಿದ್ದರು. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಜತೆ ನಜೀರ್ ಸಂಪರ್ಕ ಹೊಂದಿದ್ದಾನೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ನಜೀರ್ ಗ್ಯಾಂಗ್ ಸದಸ್ಯರು ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ಯೋಜಿಸುತ್ತಿದ್ದಾರೆ. ಐವರು ಶಂಕಿತರು ನಗರದ ಸುಲ್ತಾನಪಾಳ್ಯ ಪ್ರದೇಶದ ಕನಕನಗರ ಪ್ರದೇಶದ ಪೂಜಾ ಸ್ಥಳದ ಬಳಿ ದೊಡ್ಡ ಸಂಚು ರೂಪಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ ಎಂದರು. ವಿದೇಶದಲ್ಲಿ ನೆಲೆಸಿರುವ ಮತ್ತೊಬ್ಬ ಕಿಂಗ್‌ಪಿನ್ ತನ್ನ ವ್ಯಾಪಾರ ಪ್ರತಿಸ್ಪರ್ಧಿ ನೂರ್ ಅಹ್ಮದ್‌ನನ್ನು 2017 ರಲ್ಲಿ ಕೊಂದ ಆರೋಪಿಯಾಗಿದ್ದು, ಈ ಪ್ರಕರಣದಲ್ಲಿ 21 ಮಂದಿಯನ್ನು ಬಂಧಿಸಲಾಗಿದೆ ಎಂದು ದಯಾನಂದ ತಿಳಿಸಿದರು. ಆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ 21 ಮಂದಿಯಲ್ಲಿ ಐವರು ಶಂಕಿತರು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಾರ್ಗೆಟ್ ಬೆಂಗಳೂರು: ಶಂಕಿತ ಉಗ್ರರು ಬೆಂಗಳೂರು ನಗರವನ್ನೇ ಗುರಿಯಾಗಿಸಿಕೊಂಡು ವಿಧ್ವಂಸಕ ಕೃತ್ಯವೆಸಗಲು ಹೊಂಚುಹಾಕುತ್ತಿದ್ದರು. ಪೊಲೀಸರ ಮಾಹಿತಿ ಪ್ರಕಾರ ಅರೆಸ್ಟ್ ಆದ ಎಲ್ಲಾ ಶಂಕಿತರು ಬೆಂಗಳೂರು ಸ್ಥಳೀಯ ನಿವಾಸಿಗಳೇ ಆಗಿದ್ದಾರೆ. ಉಗ್ರರ ಜೊತೆ ಸಂಪರ್ಕ ಹೊಂದಿ ವಿಧ್ವಂಸಕ ಕೃತ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದರು. ಬೆಂಗಳೂರಿನಲ್ಲಿ ಎಲ್ಲೆಲ್ಲಿ ಬ್ಲಾಸ್ಟ್ ಮಾಡಬೇಕು ಏನು ಅನ್ನೋದರ ಬಗ್ಗೆಯೂ ತರಬೇತಿ ಪಡೆದಿದ್ದರು. ಶಂಕಿತರ ಟೀಂ ಎಲ್ಲಾ ಕಡೆಯೂ ಆಕ್ಟೀವ್ ಆಗಿತ್ತು. ಬೆಂಗಳೂರಿನ ಸುಮಾರು ಹತ್ತು ಕಡೆ ಬ್ಲಾಸ್ಟಿಂಗ್ ಗೆ ಪ್ಲಾನ್ ಮಾಡಿದ್ದರು ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.