ಕೇರಳದ ಮಾಜಿ ಮುಖ್ಯಮಂತ್ರಿ ಒಮನ್ ಚಾಂಡಿ ಇನ್ನಿಲ್ಲ

ತಿರುವನಂತಪುರಂ: ಕಾಂಗ್ರೆಸ್ ಮುತ್ಸದ್ಧಿ ಮತ್ತು ಕೇರಳದ ಮಾಜಿ ಮುಖ್ಯಮಂತ್ರಿ ಒಮನ್ ಚಾಂಡಿ(79) ಕೊನೆಯುಸಿರೆಳೆದಿದ್ದಾರೆ.

ಎರಡು ಅವಧಿಗೆ ಕೇರಳ ಮುಖ್ಯಮಂತ್ರಿಯಾಗಿದ್ದ ಚಾಂಡಿ, ಬೆಂಗಳೂರಿನಲ್ಲಿ ಮಂಗಳವಾರ ನಸುಕಿನಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬ ಸದಸ್ಯರು ಪ್ರಕಟಿಸಿದ್ದಾರೆ. ಅವರ ನಿಧನವನ್ನು ಮಗ ಚಾಂಡಿ ಒಮನ್ ಫೇಸ್‍ಬುಕ್ ಪೋಸ್ಟ್‍ನಲ್ಲಿ ತಿಳಿಸಿದ್ದಾರೆ. “ಅಪ್ಪ ಕೊನೆಯುಸಿರೆಳೆದಿದ್ದಾರೆ: ಎಂದು ಒಮನ್ ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಬರೆದಿದ್ದು, ಯಾವುದೇ ವಿವರಗಳನ್ನು ನೀಡಿಲ್ಲ. ಚಾಂಡಿ ಎಲ್ಲ ಪೀಳಿಗೆಯವರ ಮತ್ತು ವರ್ಗಗಳ ಅತ್ಯಂತ ನಾಯಕನಾಗಿದ್ದರು ಎಂದು ಕೇರಳ ಕಾಂಗ್ರೆಸ್ ಹೇಳಿದೆ.

2004-06 ಮತ್ತು 2011-16ರ ಅವಧಿಯಲ್ಲಿ ಕೇರಳ ಮುಖ್ಯಮಂತ್ರಿಯಾಗಿ ಅವರು ಸೇವೆ ಸಲ್ಲಿಸಿದ್ದರು. 27ನೇ ವಯಸ್ಸಿನಲ್ಲೇ ಶಾಸಕರಾಗಿ ಆಯ್ಕೆಯಾಗುವ ಮೂಲಕ 1970ರಲಿ ರಾಜಕೀಯ ರಂಗ ಪ್ರವೇಶಿಸಿದ ಅವರು, ಆ ಬಳಿಕ ನಿರಂತರ 11 ಬಾರಿ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದರು. ಕಳೆದ ಐದು ದಶಕಗಳಿಂದ ತಮ್ಮ ಸ್ವಕ್ಷೇತ್ರ ಪುತ್ತುಪಳ್ಳಿಯನ್ನು ಚಾಂಡಿ ಪ್ರತಿನಿಧಿಸುತ್ತಾ ಬಂದಿದ್ದಾರೆ.

2022ರಲ್ಲಿ ರಾಜ್ಯ ವಿಧಾನಸಭೆಯಲ್ಲಿ ಪುತ್ತುಪಳ್ಳಿ ಕ್ಷೇತ್ರವನ್ನು 18728 ದಿನಗಳಿಂದ ಪ್ರತಿನಿಧಿಸುವ ಮೂಲಕ ಸುಧೀರ್ಘ ಅವಧಿಗೆ ಕ್ಷೇತ್ರವನ್ನು ಪ್ರತಿನಿಧಿಸಿದ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಮಾಜಿ ಕೇರಳ ಕಾಂಗ್ರೆಸ್ (ಎಂ) ಅಧ್ಯಕ್ಷ ದಿವಂಗತ ಕೆ.ಎಂ.ಮಣಿ ಅವರ ದಾಖಲೆಯನ್ನು ಇವರು ಮುರಿದಿದ್ದರು.

ವಿವಿಧ ಸಂಪುಟಗಳಲ್ಲಿ ನಾಲ್ಕು ಬಾರಿ ಸಚಿವರಾಗಿದ್ದ ಅವರು, ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿಯೂ ನಾಲ್ಕು ಬಾರಿ ಕಾರ್ಯ ನಿರ್ವಹಿಸಿದ್ದರು.

ಪ್ರೀತಿಯ ಅಗಾಧ ಶಕ್ತಿ ಮೂಲಕ ವಿಶ್ವದ ಎಲ್ಲೆಡೆ ಪ್ರಭಾವ ಬೀರಿದ್ದ ರಾಜನ ಕಥೆ ಅಂತ್ಯ ಕಂಡಿದೆ. ದಂತಕಥೆಯಾಗಿದ್ದ ಮಹಾನ್ ನಾಯಕ ಒಮನ್ ಚಾಂಡಿ ಅವರ ನಿಧನದಿಂದ ಅತೀವ ದುಃಖವಾಗಿದೆ. ಅವರು ಅಸಂಖ್ಯಾತ ಜನರ ಬದುಕನ್ನು ತಲುಪಿದ್ದರು. ಅವರ ಪರಂಪರೆ ನಮ್ಮ ಆತ್ಮಗಳಲ್ಲಿ ಸದಾ ಅನುರಣಿಸುತ್ತಿರುತ್ತದೆ; ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂಧು ಸುಧಾಕರನ್ ಟ್ವೀಟ್ ಮಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ನನಗೆ ಅತ್ಯಂತ ಆತ್ಮೀಯರಾಗಿದ್ದ ಓಮೆನ್ ಚಾಂಡಿಯವರ ನಿಧನದ ಸುದ್ದಿ ಆಘಾತಕಾರಿ. ಕೇರಳ‌ ರಾಜ್ಯವನ್ನು ಮಾನವ ಅಭಿವೃದ್ಧಿಯ ಸೂಚ್ಯಂಕಗಳಲ್ಲಿ ಉನ್ನತ ಸ್ಥಾನದಲ್ಲಿ ಇರಿಸಲು ಕಾರಣರಾದ ಮುಖ್ಯಮಂತ್ರಿಗಳಲ್ಲಿ ಓಮನ್ ಚಾಂಡಿ ಕೂಡ ಒಬ್ಬರಾಗಿದ್ದರು. ಎರಡು ಬಾರಿ ಕೇರಳ ರಾಜ್ಯದ ಮುಖ್ಯಮಂತ್ರಿಗಳಾಗಿ ಅಪಾರ ಸಾಧನೆ ಮಾಡಿದವರಾಗಿದ್ದರು.

2004 ರಿಂದ 2006 ಮತ್ತು 2011 ರಿಂದ 2016 ರವರೆಗೆ ಕೇರಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯಪಾಲರಾಗಿ, ಕೇರಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ನಿರಂತರವಾಗಿ ಸಂವಿಧಾನದ ಆಶಯಗಳ, ಮೌಲ್ಯಗಳ‌ ರಕ್ಷಣೆಗೆ ಶ್ರಮಿಸಿ ಹೋರಾಟ ರಾಜಕಾರಣದ ಪರಂಪರೆಯನ್ನು ಪರಿಣಾಮಕಾರಿಯಾಗಿ ಮುನ್ನಡೆಸುತ್ತಿದ್ದರು.

1970 ರಿಂದ ಕೇರಳ ರಾಜ್ಯ ವಿಧಾನಸಭೆಗೆ ನಿರಂತರವಾಗಿ ಆಯ್ಕೆಯಾಗುತ್ತಾ ಅತ್ಯಂತ ದೀರ್ಘಾವಧಿ ಶಾಸಕರಾಗಿ ಪುತ್ತುಪ್ಪಲ್ಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಬಂದಿದ್ದರು. ವಿಶ್ವಸಂಸ್ಥೆಯಿಂದ ಸಾರ್ವಜನಿಕ ಸೇವೆಗಾಗಿ ಪ್ರಶಸ್ತಿಯನ್ನು ಗಳಿಸಿದ ಏಕೈಕ ಭಾರತೀಯ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆಯನ್ನೂ ಗಳಿಸಿದ್ದರು.

ಅವರು ಮುಖ್ಯಮಂತ್ರಿ ಆಗಿದ್ದ ಮತ್ತು ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಲವು ಬಾರಿ‌ ಭೇಟಿಯಾಗಿದ್ದೆವು. ಅಭಿವೃದ್ಧಿ ವಿಚಾರದಲ್ಲಿ ಅವರದೇ ಆದ ಸ್ಪಷ್ಟ ತಿಳಿವಳಿಕೆ ಮತ್ತು ಮಾದರಿಗಳನ್ನು ಹೊಂದಿದ್ದರು. ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜಾರಿ ಮಾಡಿದ್ದ ಅನ್ನಭಾಗ್ಯ ಸೇರಿದಂತೆ ಹಲವು ಯೋಜನೆಗಳನ್ನು ಅಪಾರವಾಗಿ ಶ್ಲಾಘಿಸಿದ್ದರು.‌ ಬಡವರ ಮತ್ತು ಮಧ್ಯಮ ವರ್ಗದವರ ಬದುಕನ್ನು ಉನ್ನತೀಕರಿಸುವ ಸ್ಪಷ್ಟ ಗುರಿ‌ ಮತ್ತು ಮಾರ್ಗ ನಾವು ಜಾರಿ ಮಾಡಿರುವ ಕಾರ್ಯಕ್ರಮ ಗಳಲ್ಲಿ, ನಾನು ಮಂಡಿಸಿದ ಆಯವ್ಯಯಗಳಲ್ಲಿ ಇದೆ ಎಂದು ಪತ್ರ ಬರೆದು ಮೆಚ್ವುಗೆ ಸೂಚಿಸಿದ್ದರು.

ಇವರ ನಿಧನ ಅಭಿವೃದ್ಧಿ ಮತ್ತು ಜನಪರ ರಾಜಕಾರಣಕ್ಕೆ, ಕೇರಳ ರಾಜ್ಯಕ್ಕೆ, ಭಾರತೀಯ ರಾಜಕಾರಣಕ್ಕೆ ಹಾಗೂ ನನಗೆ ವೈಯುಕ್ತಿಕವಾಗಿ ತುಂಬಲಾರದ ನಷ್ಟ.

ಮೌಲ್ಯಯುತ ರಾಜಕಾರಣದ ಹೆಜ್ಜೆಗುರುತನ್ನು ಉಳಿಸಿ ಹೋಗಿರುವ ಓಮನ್ ಚಾಂಡಿಯವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕುಟುಂಬಕ್ಕೆ ಮತ್ತು ಅಪಾರ ಬಂಧು ಮಿತ್ರರಿಗೆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

Leave a Reply

Your email address will not be published. Required fields are marked *

error: Content is protected !!