ಒಡಿಶಾ ರೈಲು ದುರಂತ: ಬಂಧಿತ ಮೂರು ಆರೋಪಿಗಳಿಗೆ ನ್ಯಾಯಾಂಗ ಬಂಧನ
ಭೋಪಾಲ್: ಒಡಿಶಾದ ಬಾಲಾಸೋರ್ ರೈಲು ದುರಂತಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ರೈಲ್ವೆ ಇಲಾಖೆಯಿಂದ ಅಮಾನತುಗೊಂಡಿರುವ ಸೀನಿಯರ್ ಸೆಕ್ಷನ್ ಎಂಜಿನಿಯರ್ ಅರುಣ್ ಕುಮಾರ್ ಮೆಹಂತಾ, ಸೆಕ್ಷನ್ ಎಂಜಿನಿಯರ್ ಮೊಹಮ್ಮದ್ ಅಮಿರ್ ಖಾನ್ ಮತ್ತು ತಾಂತ್ರಿಕ ತಜ್ಞ ಪಪ್ಪು ಕುಮಾರ್ ಅವರನ್ನು ಶುಕ್ರವಾರ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ, ಸಿಬಿಐ ಬಂಧನ ಅವಧಿ ಮುಗಿದ ನಂತರ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ವಿಶೇಷ ಕೋರ್ಟ್ ಆದೇಶಿಸಿದೆ.
ಆರೋಪಿಗಳು ಜುಲೈ 7ರಂದು ಬಂಧನಕ್ಕೊಳಗಾಗಿದ್ದು, ಜುಲೈ 11ರವರೆಗೆ ತನಿಖೆಗಾಗಿ ಸಿಬಿಐ ವಶಕ್ಕೆ ಅವರನ್ನು ಒಪ್ಪಿಸಲಾಗಿತ್ತು. ತನಿಖಾ ತಂಡದ ಕೊರಿಕೆಯ ಮೇರೆಗೆ ಮತ್ತೆ ನಾಲ್ಕು ದಿನ ಸಿಬಿಐ ವಶದಲ್ಲೇ ಇರಿಸಲಾಗಿತ್ತು. ಜುಲೈ 27ರಂದು ಮತ್ತೆ ವಿಚಾರಣೆ ನಡೆಯಲಿದೆ. ಮೂವರು ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 304 (ಉದ್ದೇಶ ಪೂರ್ವಕವಲ್ಲದ ನರಹತ್ಯೆ) ಸೆಕ್ಷನ್ 201 (ಸಾಕ್ಷ್ಯ ನಾಶ) ಮತ್ತು ಸೆಕ್ಷನ್ 153 (ರೈಲ್ವೆ ಕಾಯ್ದೆ)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಕುರಿತು ಸಿಬಿಐ ಇನ್ನೂ ತನ್ನ ವರದಿಯನ್ನು ಸಲ್ಲಿಸದಿದ್ದರೂ, ಆಗ್ನೇಯ ವೃತ್ತದ ರೈಲ್ವೆ ಸುರಕ್ಷತಾ ಕಮಿಷನರ್ (ಸಿಆರ್‌ಎಸ್) ಅವರ ತನಿಖಾ ವರದಿಯು ಸಿಗ್ನಲಿಂಗ್ ಸರ್ಕ್ಯೂಟ್ ಬದಲಾವಣೆಯಲ್ಲಿನ ತಪ್ಪಿನಿಂದ ಅಪಘಾತ ಸಂಭವಿಸಿದೆ ಎಂದು ಹೇಳಿದೆ.
ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು, ಯಶವಂತಪುರ–ಹೌರಾ ಎಕ್ಸ್‌ಪ್ರೆಸ್ ರೈಲು ಮತ್ತು ಸರಕು ಸಾಗಣೆ ರೈಲುಗಳ ಮಧ್ಯೆ ಒಡಿಶಾದ ಬಾಲೇಶ್ವರ ಜಿಲ್ಲೆಯಲ್ಲಿ ಜೂನ್ 2ರಂದು ಸಂಭವಿಸಿದ ಅಪಘಾತದಲ್ಲಿ 291 ಮಂದಿ ಮೃತಪಟ್ಟು, 1200ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದರು.