ಅಂಗನವಾಡಿಗೆ ಕಳಪೆ ಗುಣಮಟ್ಟದ ಮೊಟ್ಟೆ ಪೂರೈಕೆದಾರರು ಕಪ್ಪುಪಟ್ಟಿಗೆ- ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಬೆಂಗಳೂರು, ಜು.13: ರಾಜ್ಯದ ಕೆಲ ಅಂಗನವಾಡಿ ಕೇಂದ್ರಗಳಿಗೆ ಕಳಪೆ ಗುಣಮಟ್ಟದ ಕೋಳಿಮೊಟ್ಟೆ ಪೂರೈಕೆ ಮಾಡಿದ ಗುತ್ತಿಗೆದಾರರನ್ನು ಕೂಡಲೇ ಕಪ್ಪುಪಟ್ಟಿಗೆ ಸೇರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಯಾರು ಕಳಪೆ ಮೊಟ್ಟೆ ಪೂರೈಕೆ ಮಾಡಿದ್ದಾರೆ ಅವರನ್ನು ಕಪ್ಪುಪಟ್ಟಿಗೆ ಸೇರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಲ್ಲದೆ ಅಂತಹ ಪೂರೈಕೆದಾರರನ್ನು ಪೂರೈಕೆ ಪಟ್ಟಿಯಿಂದಲೂ ಕೈಬಿಡುವಂತೆ ನಿರ್ದೇಶನ ನೀಡಿದ್ದೇನೆ. ಖರೀದಿ ವಿಕೇಂದ್ರೀಕರಣದ ಕಾರಣದಿಂದ ಪಂಚಾಯತಿ ಮಟ್ಟದಲ್ಲೂ ಮೊಟ್ಟೆ ಖರೀದಿ ಆಗುತ್ತಿದೆ’ ಎಂದು ಸ್ಪಷ್ಟಣೆ ನೀಡಿದರು.

‘ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕೆಂಬುದು ಇಲಾಖೆಯ ಮುಖ್ಯ ಉದ್ದೇಶ. ಆದರೆ, ನಮ್ಮ ಉದ್ದೇಶ ಎಡವುತ್ತಿರುವುದು ಗಮನಕ್ಕೆ ಬಂದಿದೆ. ಮೊಟ್ಟೆ ವಿಚಾರ ಸಚಿವ ಸಂಪುಟದಲ್ಲಿ ಪ್ರಸ್ತಾಪ ಮಾಡುತ್ತೇನೆ. ಇಲಾಖೆಯ ಉದ್ದೇಶ ಈಡೇರಿಸಲು ಬದ್ಧವಾಗಿದ್ದೇವೆ. ಖರೀದಿ ವ್ಯವಸ್ಥೆ ಕೇಂದ್ರೀಕೃತ ಮಾಡಲು ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಟಾಸ್ಕ್ ಫೋರ್ಸ್ ರಚನೆ ಮಾಡಿ ಆಹಾರ ಪದಾರ್ಥಗಳ ಗುಣಮಟ್ಟದ ಮೇಲೆ ನಿಗಾ ಇರಿಸಲಾಗುವುದು ಎಂದು ಅವರು ಹೇಳಿದರು.

‘ಗೃಹಲಕ್ಷ್ಮಿ ಯೋಜನೆ ಜಾರಿಗೆ ದಿನಾಂಕ ಘೋಷಣೆಯ ಗೊಂದಲ ಇದೆ. ಇಲಾಖೆ ಎಲ್ಲ ಸಿದ್ದತೆ ಮಾಡಿಕೊಂಡಿದ್ದು, ಅಗತ್ಯ ಅನುದಾನ ಹಾಗೂ ಫಲಾನುಭವಿ ಪಟ್ಟಿಗಳು ತಯಾರಿವೆ. ಆಧಾರ್ ಲಿಂಕ್ ಇರುವ ಖಾತೆಯನ್ನಷ್ಟೇ ನೀಡಬೇಕೇ ಅಥವಾ ಬೇರೆ ಖಾತೆ ಇರುವ ಫಲಾನುಭವಿಗಳಗೆ ನೀಡಬೇಕೇ ಎಂಬ ಗೊಂದಲ ಇದೆ. ಈ ಗೊಂದಲ ಬಗೆಹರಿಸಿಕೊಂಡು ದಿನಾಂಕ ಪ್ರಕಟಿಸಲಾಗುವುದು ಎಂದು ಹೆಬ್ಬಾಳ್ಕರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!