ಕೊರೊನಾ ಸೋಂಕಿಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಬಲಿ
ನವದೆಹಲಿ: ಕೇಂದ್ರ ಸಚಿವ ಸುರೇಶ್ ಅಂಗಡಿ (65) ಇಂದು ಇಹಲೋಕ ತ್ಯಜಿಸಿದ್ದಾರೆ. ಕಳೆದ ವಾರ ಸುರೇಶ್ ಅಂಗಡಿ ಅವರಿಗೆ ಕೊರೊನಾ ಸೋಂಕು ತಗುಲಿತ್ತು.
ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಂಜೆ ನಿಧನರಾಗಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಸುರೇಶ್ ಅಂಗಡಿ ಪ್ರತಿನಿಧಿಸುತ್ತಿದ್ದರು. ಮುಂಬೈ ಕರ್ನಾಟಕ ಭಾಗದಲ್ಲಿ ಬಿಜೆಪಿಯ ಪ್ರಬಲ ಮುಖಂಡರಾಗಿದ್ದರು.
ಕೇಂದ್ರ ಸಚಿವ ಸಂಪುಟದ ರಾಜ್ಯ ರೈಲ್ವೇ ಸಚಿವರಾಗಿ ಕೆಲಸ ಮಾಡುತ್ತಿದ್ದರು. ಅಧಿವೇಶನ ಆರಂಭವಾದಾಗ ಎಲ್ಲ ಸಂಸದರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಅಂಗಡಿ ಅವರಿಗೆ ಸೋಂಕು ತಗುಲಿರೋದು ದೃಢಪಟ್ಟಿತ್ತು.
4 ಬಾರಿ ಲೋಕಸಭೆ ಸಂಸದರಾಗಿ ಸುರೇಶ್ ಅಂಗಡಿ ಆಯ್ಕೆಯಾಗಿದ್ದರು. 2004, 2009, 2014 ಮತ್ತು 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದರು. ಸುರೇಶ್ ರವರು ಸೋಮವ್ವ ಮತ್ತು ಚೆನ್ನಬಸಪ್ಪ ಅಂಗಡಿ ದಂಪತಿಗೆ 1955 ಜೂನ್ 1 ಜನಿಸಿದರು. ಅವರಿಗೆ ಮದುವೆಯಾಗಿ 2 ಹೆಣ್ಣು ಮಕ್ಕಳಿದ್ದಾರೆ. ಅವರು ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲ್ಲೂಕಿನ ಕೆ.ಕೆ. ಕೊಪ್ಪಾ ಗ್ರಾಮದವರು.
ಸುರೇಶ್ ಅಂಗಡಿ ಅವರು ಬೆಳಗಾವಿಯ ಎಸ್.ಎಸ್.ಎಸ್.ಸಮಿತಿ ಕಾಲೇಜ್ ಆಫ್ ಕಾಮರ್ಸ್ ನಿಂದ ಪದವಿಯನ್ನು ಪಡೆದಿದ್ದರು. ನಂತರ ಅವರು ಬೆಳಗಾವಿಯ ಪ್ರತಿಷ್ಠಿತ ರಾಜ ಲಖಮ್ ಗೌಡ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದರು.
ಸಾರ್ವಜನಿಕ ಜೀವನಕ್ಕೆ ಪ್ರವೇಶಿಸುವ ಮೊದಲು ಅವರು ತಮ್ಮದೇ ಆದ ಖಾಸಗಿ ವ್ಯವಹಾರವನ್ನು ನಡೆಸುತ್ತಿದ್ದರು. ವಾಸವದತ್ತ ಸಿಮೆಂಟ್ [ಪ್ರಸ್ತುತ ಬಿರ್ಲಾ ಶಕ್ತಿ ಸಿಮೆಂಟ್] ಅನ್ನು ಯಶಸ್ವಿಯಾಗಿ ಚಾಲನೆಗೆ ತಂದು ಬೆಳಗಾವಿಯಲ್ಲೇ ಪ್ರಥಮ ಸ್ಥಾನಕ್ಕೆ ಅಂಗಡಿ ತಂದರು. ಇಂದಿಗೂ ಅವರು ತಮ್ಮ ಸಿಮೆಂಟ್ ವ್ಯವಹಾರವನ್ನು ನಡೆಸುತ್ತಿದ್ದಾರೆ.