ಕಾಂಗ್ರೆಸ್ ಸರಕಾರದ ವಿರುದ್ಧ ಪೋಸ್ಟಿಂಗ್ ಗ್ಯಾರಂಟಿ ಆರೋಪ ಮಾಡಿದ ಕುಮಾರಸ್ವಾಮಿ

ಬೆಂಗಳೂರು,ಜು 12: ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಕಾಸಿಗಾಗಿ ಪೋಸ್ಟಿಂಗ್ ಗ್ಯಾರಂಟಿ ನಡೆಸುತ್ತಿದೆ ಎಂದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್‌ ನಾಯಕರು ರಾಜ್ಯದ ಜನತೆಗೆ ಐದು ಗ್ಯಾರಂಟಿಗಳನ್ನು ಹೊರಡಿಸಿದ್ದರು. ಆದರೆ ಅಧಿಕಾರಕ್ಕೇರಿದ ಬಳಿಕ ವರಸೆ ಬದಲಾಯಿಸಲಾಗಿದೆ ಎಂದು ಆರೋಪಿಸಿದರು.

ವಿಧಾನಸಭೆಯಲ್ಲಿ ಇಂದು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲ ಇಲಾಖೆಗಳಲ್ಲಿ ಸರಕಾರ ವರ್ಗಾವಣೆ ನಡೆಸುತ್ತಿದ್ದು, ವರ್ಗಾವಣೆಗೆ ದರ ನಿಗದಿ ಆಗಿದೆ. ಈ ಬಗ್ಗೆ ಹಾದಿಬೀದಿಯಲ್ಲಿ ಜನರು ಆಡಿಕೊಳ್ಳುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಯಾವುದೋ ಒಂದು ಇಲಾಖೆಯಲ್ಲಿ ನಿಗದಿ ಮಾಡಿರುವ ವರ್ಗಾವಣೆಯ ದರಪಟ್ಟಿ ನನ್ನ ಕೈಯಲ್ಲಿದೆ. ಅದನ್ನು ಯಾರೋ ನನಗೆ ತಂದು ಸಂಪೂರ್ಣ ವಿವರ ನೀಡಿದ್ದಾರೆ ಎಂದರು.ಈ ಸಂಬಂಧ ನನ್ನ ಬಳಿಯಲ್ಲಿರುವ ದಾಖಲೆಗಳನ್ನು ಸಭಾಧ್ಯಕ್ಷರಿಗೆ, ಮುಖ್ಯಮಂತ್ರಿಗಳಿಗೆ ನಾನು ನೀಡಲು ಸಿದ್ಧನಿದ್ದೇನೆ. ಯಾವುದೇ ಧ್ವೇಷದಿಂದ ಈ ರೀತಿ ಮಾಡುತ್ತಿಲ್ಲ. ಹಾಗೂ ಯಾವುದೇ ಸಹನೆ ಕಳೆದುಕೊಂಡಿಲ್ಲ ಎಂದರು. ಒಂದು ನಿರ್ದಿಷ್ಟ ಇಲಾಖೆಯ ಕಥೆ ಇದು. ಎಷ್ಟೆಷ್ಟು ದರ ನಿಗದಿ ಮಾಡ್ಕೊಂಡಿದ್ದಾರೆನ್ನುವ ವಿವರ ಸಿಕ್ಕಿರುವ ಪಟ್ಟಿಯಲ್ಲಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ಈ ಹಿಂದೆ ಇದೇ ಕಾಂಗ್ರೆಸ್ ಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ವರ್ಗಾವಣೆಯ ರೇಟ್ ಕಾರ್ಡ್ ಹೊರಡಿಸಿತ್ತು. ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷವು ಮಾಧ್ಯಮಗಳಲ್ಲಿ ನೀಡಿದ್ದ ಹಗರಣಗಳ ರೇಟ್ ಕಾರ್ಡ್ ಜಾಹೀರಾತನ್ನು ಪ್ರದರ್ಶಿಸಿದರು. ಹಿಂದೆ ನೀವು ಬಿಜೆಪಿ ಸರ್ಕಾರದ ವಿರುದ್ಧ ರೇಟ್ ಕಾರ್ಡ್ ಜಾಹೀರಾತು ಹಾಕಿದ್ದೀರಿ. ಮುಂದೆ ನಿಮ್ಮ ವಿರುದ್ಧ ರೇಟ್ ಕಾರ್ಡ್ ಜಾಹೀರಾತು ಹೊರಡಿಸಬೇಕಾಗುತ್ತದೆ. ಅದರಿಂದ ಈಗಲೇ ಎಚ್ಚೆತ್ತುಕೊಂಡು ಸರಿ ಮಾಡಿಕೊಳ್ಳಿ ಎನ್ನುವ ಸದುದ್ದೆಶದಿಂದ ಹೇಳುತ್ತಿದ್ದೇನೆ ಎಂದು ಕುಮಾರಸ್ವಾಮಿಯವರು ಸರಕಾರವನ್ನು ಎಚ್ಚರಿಸಿದರು.

Leave a Reply

Your email address will not be published. Required fields are marked *

error: Content is protected !!