ತಿಂಗಳು ಪೂರೈಸಿದ ‘ಶಕ್ತಿ’ ಯೋಜನೆ: ಮಹಿಳಾ ಸಬಲೀಕರಣದ ದಿಟ್ಟ ಹೆಜ್ಜೆ ಯಶಸ್ಸು- ಸಚಿವ ರಾಮಲಿಂಗ ರೆಡ್ಡಿ
ಬೆಂಗಳೂರು, ಜು.12: ‘ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ಕಾಂಗ್ರೆಸ್ ಸರಕಾರದ ಮಹತ್ವಕಾಂಕ್ಷೆಯ ‘ಶಕ್ತಿ’ ಯೋಜನೆ ಜಾರಿಯಾಗಿ ಒಂದು ತಿಂಗಳು ಪೂರೈಸಿದ್ದು, ಸಾರಿಗೆ ಸಂಸ್ಥೆಗಳಲ್ಲಿ ಮಹತ್ವರ ಬದಲಾವಣೆಗೆ ಕಾರಣವಾಗಿ, ಮಹಿಳಾ ಪ್ರಯಾಣಿಕರಿಂದ ಅಭೂತಪೂರ್ವ ಯಶಸ್ಸನ್ನು ಗಳಿಸಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಜು.4ರಂದು ಒಂದೇ ದಿನ ಒಟ್ಟು 1.20 ಕೋಟಿ ಮಂದಿ ಪ್ರಯಾಣಿಕರು ಸಂಚರಿಸಿದ್ದು, ಆ ಪೈಕಿ 70ಲಕ್ಷಕ್ಕೂ ಅಧಿಕ ಮಂದಿ ಮಹಿಳಾ ಪ್ರಯಾಣಿಕರಾಗಿದ್ದು, ಶೇ.58.43ರಷ್ಟು ಪ್ರಮಾಣದಲ್ಲಿ ಸಂಚರಿಸಿದ್ದಾರೆ. ಯೋಜನೆ ಜಾರಿಯಾದ ಜೂನ್ 11ರಿಂದ ಜುಲೈ 10 ವರೆಗೆ ಒಟ್ಟು 16 ಕೋಟಿಗೂ ಅಧಿಕ ಮಂದಿ ಮಹಿಳೆಯರು ಸಾರಿಗೆ ಬಸ್‍ಗಳಲ್ಲಿ ಪ್ರಯಾಣಿಸಿದ್ದು, ಉಚಿತ ಟಿಕೆಟ್ ಮೌಲ್ಯ ಒಟ್ಟು 401.94 ಕೋಟಿ ರೂ.ಗಳಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
‘ಪ್ರತಿನಿತ್ಯ ಕೆಎಸ್ಸಾರ್ಟಿಟಿ-16.97ಲಕ್ಷ ಮಂದಿ ಮಹಿಳಾ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, 5.04 ಕೋಟಿ ರೂ.ಗಳು, ಬಿಎಂಟಿಸಿ-17.95 ಲಕ್ಷ ಮಂದಿ, 2.32ಕೋಟಿ ರೂ., ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ-13.42 ಲಕ್ಷ ಮಂದಿ, 3.45 ಕೋಟಿ ರೂ.ಗಳು ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ- 7.43 ಲಕ್ಷ ಮಂದಿ, 2.59 ಕೋಟಿ ರೂ.ಸೇರಿದಂತೆ ಒಟ್ಟು ಪ್ರತಿನಿತ್ಯ 55.77 ಲಕ್ಷ ಮಂದಿ, ಒಟ್ಟು 13.40 ಕೋಟಿ ರೂ. ಗಳಷ್ಟು ಉಚಿತ ಟಿಕೆಟ್ ಮೌಲ್ಯವಾಗಿದೆ ಎಂದು ರಾಮಲಿಂಗಾರೆಡ್ಡಿ ವಿವರಿಸಿದ್ದಾರೆ.
‘ಸಾರ್ವಜನಿಕ ಪ್ರಯಾಣಿಕರು ಅದರಲ್ಲಿಯೂ ಮಹಿಳಾ ಪ್ರಯಾಣಿಕರು ಸಾರಿಗೆ ಸಂಸ್ಥೆ ವಾಹನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸಿ ‘ಸಾರಿಗೆ ಬಸ್ಸುಗಳು ಜನರ ಜೀವನಾಡಿಯೂ ಹಾಗೂ ಮಹಿಳೆಯರ ಪ್ರಯಾಣದ ಸಾರಥಿಯೂ ಹೌದು’ ಎಂಬುದನ್ನು ಸಾಬೀತುಪಡಿಸಿದೆ. ಕೆಲ ಸಣ್ಣ-ಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ, ‘ಶಕ್ತಿ’ ಯೋಜನೆ ಸಂಪೂರ್ಣ ಸಾಫಲ್ಯತೆ ಕಂಡಿದೆ. ಮಹಿಳಾ ಸಬಲೀಕರಣದತ್ತ ದಿಟ್ಟ ಹೆಜ್ಜೆಗೆ ನಾಂದಿ ಹಾಡಿದೆ’ ಎಂದು ರಾಮಲಿಂಗಾರೆಡ್ಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.