ಗ್ಯಾರೆಂಟಿ ಯೋಜನೆ ಜಾರಿಯಲ್ಲಿ ನುಡಿದಂತೆ ನಡೆಯದ ಸರ್ಕಾರ: ಬಸವರಾಜ ಬೊಮ್ಮಾಯಿ

ಬೆಂಗಳೂರು: ಗ್ಯಾರೆಂಟಿ ಯೋಜನೆಗಳ ಜಾರಿಯಲ್ಲಿ ನುಡಿದಂತೆ ನಡೆಯದ ಕವಲು ದಾರಿಯಲ್ಲಿ ಸರ್ಕಾರ ನಡೆಯುತ್ತಿದ್ದು, ಒಂದೇ ತಿಂಗಳಲ್ಲಿ ಅಪಖ್ಯಾತಿಗೆ ಒಳಗಾದ ಸರ್ಕಾರ ಇದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಂಚ ಗ್ಯಾರಂಟಿ ಜಾರಿಗೊಳಿಸುವಲ್ಲಿ ಗೊಂದಲ ಇದೆ. ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಅಂತ ಆರೋಪ ಮಾಡಿದ್ದೀರಿ, ಎಫ್‌ಸಿ‌ಐ ಅಧಿಕಾರಿಗೆ ಒಂದು ರಾಜ್ಯಕ್ಕೆ ಅಕ್ಕಿ ಕೊಡುವ ಅಧಿಕಾರ ಇಲ್ಲ. ನೀವು ಕೇಂದ್ರ ಸರ್ಕಾರದ ಜತೆ ಮಾತಾಡಬೇಕಿತ್ತು ಅಷ್ಟಕ್ಕೂ ಕೇಂದ್ರ ಸರ್ಕಾರ ನಿಮ್ಮ ಅನ್ನ ಭಾಗ್ಯಕ್ಕೆ ಅಕ್ಕಿ ಕೊಡ್ತೀವಿ ಅಂತ ಹೇಳಿತ್ತಾ ? ಕೇಂದ್ರದ ಜೊತೆಗೆ ಇದರ ಬಗ್ಗೆ ಚರ್ಚೆ ಮಾಡಿದ್ದಿರಾ ಎಂದು ಪ್ರಶ್ನಿಸಿದರು.

ಮಾನ್ಸೂನ್ ಕಾರಣದಿಂದ ಅಕ್ಕಿ ಅಲಭ್ಯತೆ ಇದೆ, ಹಾಗಾಗಿ ಕೇಂದ್ರ ಅಕ್ಕಿ ಕೊಡಕ್ಕಾಗಿಲ್ಲ ಪಂಜಾಬ್‌ ಸರ್ಕಾರ ಅಕ್ಕಿ ಕೊಡಲು ತಯಾರಾಗಿದ್ದರು, ಆಂಧ್ರಪ್ರದೇಶ, ಛತ್ತೀಸ್‌ಗಡ ಸರ್ಕಾರಗಳು ಸಹಾಯ ಮಾಡಲು ಮುಂದಾಗಿದ್ದವು. ತೆಲಂಗಾಣ ಸರ್ಕಾರ ಭತ್ತ ಕೊಡಲು ಸಿದ್ದರಿದ್ದರು. ನಿಮಗೆ ಜನರಿಗೆ ಅಕ್ಕಿ ಕೊಡುವ ಇಚ್ಛಾಶಕ್ತಿ ಇಲ್ಲ. ಈಗ ದುಡ್ಡು ಕೊಡಲು ಮುಂದಾಗಿದ್ದೀರಾ, ಜನರು ಹಣ ತಿಂತಾರಾ ಅಂತ ಸಿಎಂ ಕೇಳಿದ್ದಾರೆ. ಸರ್ಕಾರ 5 ಕೆಜಿ ಅಕ್ಕಿ ಬದಲು 170 ರೂ. ನೀಡುವುದು ಒಬ್ಬ ಬಡ ಮಹಿಳೆಯ ಅರ್ಧ ದಿನದ ಕೂಲಿಗೆ ಸಮವಾಗಿದೆ ಎಂದು ಹೇಳಿದರು.

ಅಕ್ಕಿ ಕೊಡುವುದು ಹೊಸತೇನಲ್ಲ
ಪಡಿತರ ವ್ಯವಸ್ಥೆ ಸ್ವಾತಂತ್ರ್ಯ ಬಂದಾಗಿನಿಂದಲೂ‌ ಇದೆ. ಇಂಗ್ಲೆಂಡಿನ ಆಡಳಿತದ ಕಾಲದಿಂದಲೇ ಪಡಿತರ ಕೊಡುವ ವ್ಯವಸ್ಥೆ ಇತ್ತು. ಆಗ ದುಡ್ಡು ತೆಗೆದುಕೊಂಡು ಪಡಿತರ ಕೊಡುತ್ತಿದ್ದರು. ಅಕ್ಕಿ, ಸಕ್ಕರೆ, ಗೊಧಿ ಕೊಡುತ್ತಿದ್ದರು. ಆ ಮೇಲೆ ಆಹಾರ ಭದ್ರತಾ ಕಾಯ್ದೆ ಬಂದ ನಂತರ ಪಡಿತರ ವ್ಯವಸ್ಥೆಯನ್ನು ಕಾನೂನು ವ್ಯಾಪ್ತಿಗೆ ತರಲಾಯಿತು. ಮೊದಲು ಕೇಂದ್ರ ಸರ್ಕಾರ 3 ರೂ. ಗೆ ಕೊಡಲಾಗುತ್ತಿತ್ತು. ಕೊರೊನಾ ಸಂದರ್ಭದಲ್ಲಿ ಕೇಂದ್ರ ಸರ್ಕಾರ 5 ಕೆಜಿ ಉಚಿತವಾಗಿ ಕೊಡುತ್ತಿದೆ. ಈಗ ಹೆಚ್ಚಿಗೆ ಕೊಡಲು ರಾಜ್ಯ ಸರ್ಕಾರ ಕೊಡಬೇಕಿದೆ. ನಮ್ಮ ಸರ್ಕಾರದ ಅವಧಿಯಲ್ಲೂ 10 ಕೆಜಿ ಕೊಡುತ್ತಿದ್ದೇವು. ಪಡಿತರ ಅಕ್ಕಿ ಕಾಳ ಸಂತೆಯಲ್ಲಿ ನಿರಂತರವಾಗಿ ಮಾರಾಟವಾಗುತ್ತಿವೆ. ಹೆಚ್ಚು ಅಕ್ಕಿ ಕೊಟ್ಟಷ್ಟು ಕಾಳ ಸಂತೆಕೋರರಿಗೆ ಉತ್ತೇಜನ ನೀಡಿದಂತಾಗಬಾರದು. ಪಡಿತರ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟಾವಾಗುತ್ತಿರುವುದಕ್ಕೆ ಕಾಲ ಕಾಲಕ್ಕೆ ಪ್ರಕರಣಗಳು ದಾಖಲಾಗುತ್ತಿರುವುದೇ ಸಾಕ್ಷಿ. ಅದರಿಂದ ಒಬ್ಬ ಐಎಎಸ್ ಅಧಿಕಾರಿ ಸಾವಿಗೀಡಾಗಿದ್ದಾರೆ.

ಯುವನಿಧಿ ಯೋಜನೆ ಪದವಿ ಮುಗಿಸಿ ಆರು ತಿಂಗಳು ಉದ್ಯೋಗ ಸಿಗದವರಿಗೆ ನೀಡುವುದಾಗಿ ಹೇಳುತ್ತಾರೆ. ಪದವಿ‌ಮುಗಿಸಿ ಎರಡು ಮೂರು ವರ್ಷ ಕಳೆದರೂ ಉದ್ಯೋಗ ಸಿಗದವರಿಗೆ ಯುವನಿಧಿ ನೀಡಿದ್ದರೆ ಅನುಕೂಲ ಆಗುತ್ತಿತ್ತು. ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಿರಿ. ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ 200 ಯುನಿಟ್ ವಿದ್ಯುತ್ ಉಚಿತ ಕೊಡುವುದಾಗಿ ಹೇಳಿ, ಈಗ ವಾರ್ಷಿಕ ಬಳಕೆಯ ಸರಾಸರಿ ಮೇಲೆ ಹತ್ತು ಪರ್ಸೆಂಟ್ ಹೆಚ್ಚಿಗೆ ನೀಡುವುದಾಗಿ‌ ಹೇಳುತ್ತಿದ್ದೀರಿ. ಗ್ರಾಮೀಣ ಮಹಿಳೆಯರಿಗೆ ಉತ್ತಮ ಜೀವನ ನಡೆಸಲು ಅವಕಾಶ ಕಲ್ಪಿಸಬಾರದೇ ಅವರಿಗೆ ಉಚಿತ ವಿದ್ಯುತ್ ನಿಂದ ಬೇರೆ ಬೇರೆ ಕೆಲಸಗಳಿಗೆ ಅನೂಕೂಲ ಆಗುತ್ತಿರಲಿಲ್ಲವೇ, ನಗರದ ಮಹಿಳೆಯರೂ ಮಾತ್ರ ಉತ್ತಮ ಜೀವನ ನಡೆಸಬೇಕಾ, ಹಳ್ಳಿ ಮಹಿಳೆಯರು ಹೊಗೆ ಕುಡಿತಾ ಇರಬೇಕಾ ಎಂದು ಪ್ರಶ್ನಿಸಿದರು.

ಈ ಮಧ್ಯೆ ಕರೆಂಟ್ ದರ ಹೆಚ್ಚಳ ಮಾಡಿ ಜನರಿಗೆ ಭಾರ ಹಾಕಿದ್ದಾರೆ. ಗೃಹಜ್ಯೋತಿ ಯೋಜನೆ ಅನಷ್ಠಾನದಲ್ಲಿ ನುಡಿದಂತೆ ನಡೆದಿಲ್ಲ. ಗೃಹ ಲಕ್ಷ್ಮೀ ಯೋಜನೆಯಲ್ಲಿ ಅತ್ತೆ ಸೊಸೆಗೆ ಜಗಳ ಹಚ್ಚುವ ಕೆಲಸ ಮಾಡಿದ್ದಾರೆ. ಗೃಹಲಕ್ಷ್ಮೀಗೆ ಗೃಹಣ‌ ಹಿಡಿದಿದೆ. ಹೆಣ್ಣು ಮಕ್ಕಳಿಗೆ ಬಸ್ ಪಾಸ್ ವ್ಯವಸ್ಥೆ ಮಾಡಿದ್ದಾರೆ. ಅದರ ಆವಾಂತರ ಎಲ್ಲರೂ ನೋಡಿದ್ದೇವೆ. ಪುರುಷರಿಗೂ ಮಹಿಳೆಯರ ಟಿಕೆಟ್ ಕೊಟ್ಟು ಕಾರ್ಪೊರೇಷನ್ ಹೆಚ್ಚಿನ ಹಣ ಪಡೆಯಲು ಪ್ರಯತ್ನ ನಡೆದಿದೆ. ಈ ಮಿಸ್ ಯೂಸ್ ತಪ್ಪಿಸಲು ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.

ಹಳ್ಳಿಗಳಲ್ಲಿ ಶಾಲೆ, ಆರೋಗ್ಯ ಸೇವೆ ಅಗತ್ಯವಿದೆ. ಉದ್ಯೋಗ ಸೃಷ್ಟಿ ಮಾಡಬೇಕು. ನಮ್ಮ ಅವಧಿಯಲ್ಲಿ ವಾರ್ಷಿಕ 6 ಲಕ್ಷ‌ 36ಸಾವಿರ ಉದ್ಯೊಗ ಸೃಷ್ಟಿಯಾಗಿದೆ. ಗ್ಯಾರೆಂಟಿ ಯೋಜನೆಗಳಿಗೆ ವಾರ್ಷಿಕ 52 ಸಾವಿರ ಕೋಟಿ ಹೆಚ್ಚುವರಿ ಹಣ ಸಂಗ್ರಹ ಮಾಡಬೇಕು.ಇದು ಪ್ರತಿ ವರ್ಷ 52 ಸಾವಿರ ಕೋಟಿ ಹಣ ಸಂಗ್ರಹ ಮಾಡಬೇಕು. ಈ ಹಿನ್ನೆಲೆಯಲ್ಲಿ ಕೃಷ್ಣಾ, ಕಾವೇರಿ, ಮೇಕೆದಾಟು ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಆಗುವುದಿಲ್ಲ. ನೀರಾವರಿ ಯೋಜನೆಗಳಿಗೆ ಇದರಿಂದ ದೊಡ್ಡ ಹೊಡೆತ ಬೀಳುತ್ತದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!