ಆಸ್ಟ್ರೇಲಿಯಾ: ಭಾರತೀಯ ಮೂಲದ ವಿದ್ಯಾರ್ಥಿನಿಯ ಜೀವಂತ ಸಮಾಧಿ- ಕೃತ್ಯ ಒಪ್ಪಿಕೊಂಡ ಮಾಜಿ ಪ್ರಿಯಕರ

ಸಿಡ್ನಿ: ಭಾರತೀಯ ಮೂಲದ ನರ್ಸಿಂಗ್ ವಿದ್ಯಾರ್ಥಿನಿಯನ್ನು ಆಕೆಯ ಮಾಜಿ ಪ್ರಿಯಕರ ಕೈಕಾಲು ಕಟ್ಟಿ ಜೀವಂತ ಸಮಾಧಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಆಸ್ಟ್ರೇಲಿಯಾ ನ್ಯಾಯಾಲಯ ಬುಧವಾರ ನಡೆಸಿದೆ. ʼಸೇಡಿನ ಕ್ರಮವಾಗಿʼ ಯುವತಿಯನ್ನು ಹತ್ಯೆಗೈದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

21 ವರ್ಷದ ಜಾಸ್ಮೀನ್ ಕೌರ್ ಎಂಬ ಯುವತಿಯನ್ನು 2021ರ ಮಾರ್ಚ್‌ನಲ್ಲಿ ಆಕೆಯ ಮಾಜಿ ಗೆಳೆಯ ತಾರಿಕ್‌ ಜೋತ್‌ ಸಿಂಗ್‌ ಅಪಹರಿಸಿದ್ದು, ಆಕೆಯನ್ನು ಕೇಬಲ್‌ಗಳಿಂದ ಕಟ್ಟಿ, ಗುಂಡಿ ತೋಡಿ ಜೀವಂತ ಸಮಾಧಿ ಮಾಡಿದ್ದ. ತನ್ನೊಂದಿಗೆ ಸಂಬಂಧ ಕಡಿದುಕೊಂಡಿರುವ ದ್ವೇಷದಲ್ಲಿ ಆರೋಪಿ ಈ ಬರ್ಬರ ಕೃತ್ಯ ಎಸಗಿದ್ದ ಎಂದು ಪ್ರಾಸಿಕ್ಯೂಟರ್‌‌ ಕಾರ್ಮೆನ್ ಮ್ಯಾಟಿಯೊ ಹೇಳಿದ್ದಾರೆ.

ಸಂತ್ರಸ್ತ ಯುವತಿ ಹಾಗೂ ಆರೋಪಿಯ ನಡುವಿನ ಸಂಬಂಧದಲ್ಲಿ ಬಿರುಕು ಬಿದ್ದು ಯುವತಿ ಆತನಿಂದ ದೂರವಾಗಿದ್ದಳು ಎನ್ನಲಾಗಿದೆ. ಇದರಿಂದ ಕುಪಿತನಾಗಿದ್ದ ತಾರಿಕ್‌ ಜೋತ್‌ ಸಿಂಗ್ ಆಕೆಯನ್ನು ಅಪಹರಿಸಿ ಕೊಂದಿದ್ದಾನೆ ಎಂದು ಪ್ರಾಸಿಕ್ಯೂಟರ್‌ ತಿಳಿಸಿದ್ದಾರೆ.

ಕೌರ್‌ ಳನ್ನು ಆಕೆಯ ಕೆಲಸದ ಸ್ಥಳದಿಂದ ಅಪಹರಿಸಿದ್ದ ಹಂತಕ, ಕಾರಿನ ಬೂಟಿನಲ್ಲಿ ಆಕೆಯನ್ನು ಕಟ್ಟಿ ಹಾಕಿ 4 ಗಂಟೆಗಳ ಕಾಲ ಸುಮಾರು 650 ಕಿಮೀ ದೂರಕ್ಕೆ ಕರೆದೊಯ್ದಿದ್ದ. ಆಕೆಯ ಕೈಕಾಲುಗಳನ್ನು ಕೇಬಲ್ ಟೈಗಳಿಂದ ಹಾಗೂ ಗಫರ್ ಟೇಪ್‌ನಿಂದ ಕಟ್ಟಿ ಹಾಕಲಾಗಿತ್ತು. ಜೀವಂತ ಸಮಾಧಿ ಮಾಡಿದ್ದರಿಂದ ಆಕೆಯು ಮಣ್ಣನ್ನೇ ಉಸಿರಾಡಿದ್ದಳು. ಆಕೆಯ ಜೀವ ಹೋಗುವ ಕೊನೆ ಕ್ಷಣ ಅತ್ಯಂತ ಅಮಾನುಷವಾಗಿತ್ತು, ಅವಳ ಮೈಲ್ಮೈ ಗಂಟಲನ್ನು ಕತ್ತರಿಸಲಾಗಿತ್ತು ಎಂದು ಪ್ರಾಸಿಕ್ಯೂಟರ್‌ ಹೇಳಿದ್ದಾರೆ.

ಕೌರ್ ಕೊಲ್ಲಲ್ಪಟ್ಟ ರೀತಿಯು, ನಿಜವಾಗಿಯೂ, ಅಸಾಮಾನ್ಯ ಮಟ್ಟದ ಕ್ರೌರ್ಯವನ್ನು ಒಳಗೊಂಡಿತ್ತು” ಎಂದು ಕೃತ್ಯದ ಭೀಕರತೆಯನ್ನು ಪ್ರಾಸಿಕ್ಯೂಟರ್‌ ವಿವರಿಸಿದ್ದಾರೆ.

ತಾರಿಕ್ ಜೋತ್ ಸಿಂಗ್ ತನ್ನನ್ನು ಹಿಂಬಾಲಿಸುತ್ತಿದ್ದಾನೆ ಎಂದು ಯುವತಿ ಪೊಲೀಸ್ ದೂರು ನೀಡಿದ ಒಂದು ತಿಂಗಳ ನಂತರ ಆಕೆ ಕೊಲ್ಲಲ್ಪಟ್ಟಿದ್ದಾಳೆ ಎಂದು ಪ್ರಾಸಿಕ್ಯೂಟರ್‌ಗಳು ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಜಸ್ಮೀನ್ ಕೌರ್ ಅವರ ಹತ್ಯೆಯ ಆರಂಭಿಕ ತನಿಖೆಯ ಸಮಯದಲ್ಲಿ, ತಾರಿಕ್‌ ಜೋತ್ ಆರೋಪಗಳನ್ನು ನಿರಾಕರಿಸಿದ್ದ. ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು, ತಾನು ಆಕೆಯ ಶವವನ್ನು ಹೂತಿಟ್ಟಿದ್ದೆ ಎಂದು ಆತ ಹೇಳಿದ್ದನು.

Leave a Reply

Your email address will not be published. Required fields are marked *

error: Content is protected !!