ಪ್ರಾಕೃತಿಕ ವಿಕೋಪ- ರೈತರಿಗೆ ತ್ವರಿತ ಪರಿಹಾರ ನೀಡಿ : ರೋಯ್ಸ್ ಫೆರ್ನಾಂಡಿಸ್
ಉಡುಪಿ (ಉಡುಪಿ ಟೈಮ್ಸ್ ವರದಿ) : ರಾಜ್ಯದ ಉಡುಪಿ ಜಿಲ್ಲೆ ಮತ್ತು ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ನೆರೆ – ಪ್ರವಾಹದಿಂದ ಸಾರ್ವಜನಿಕರ ಆಸ್ತಿಪಾಸ್ತಿಗೆ ಅಪಾರ ಹಾನಿ ಸಂಭವಿಸಿದೆ. ಅನಿರೀಕ್ಷಿತವಾಗಿ ಬಂದ ಪ್ರವಾಹವು ಜನ ಸಾಮಾನ್ಯರ ಅನೇಕ ಸಂಕಷ್ಟಗಳಿಗೆ ಕಾರಣವಾಗಿದೆ. ಮನೆಯ ಗೃಹೋಪಯೋಗಿ ಪೀಠೋಪಕರಣಗಳು ಮತ್ತು ವಿದ್ಯುತ್ ಉಪಕರಣಗಳು ತತ್ ಕ್ಷಣ ಸುರಕ್ಷಿತ ತಾಣಕ್ಕೆ ಸಾಗಿಸಲು ಆಗದೇ ಕೆಟ್ಟು ಹೋಗಿವೆ. ಕೆಲವು ಕಡೆ ರೈತರ ಕೃಷಿ ಪಂಪು ಸೆಟ್ಟುಗಳು ಕೂಡ ಹಾನಿಗೀಡಾಗಿವೆ.
ಹಾನಿಗೀಡಾದ ಆಸ್ತಿಪಾಸ್ತಿಗಳ ಬಗ್ಗೆ ಪಂಚಾಯತ್ ಮಟ್ಟದಲ್ಲಿ ಕಂದಾಯ ಇಲಾಖೆಯು ದಾಖಲೆಗಳನ್ನು ಸ್ವೀಕರಿಸುತ್ತಿದ್ದಾರೆ. ಆದರೆ ಹಾನಿಗೀಡಾದ ಕೃಷಿ ಪಂಪು ಸೆಟ್ಟುಗಳ ದಾಖಲೆಗಳನ್ನು ತೆಗೆದುಕೊಳ್ಳಲು ನಿರಾಕರಿಸುತ್ತಿದ್ದು, ನಷ್ಟದ ಪರಿಹಾರ ದೊರಕುವುದು ಮರೀಚಿಕೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಗೊಂದಲವನ್ನು ನಿವಾರಿಸಬೇಕಾಗಿದೆ. ಅತಿವೃಷ್ಟಿ ಹಾಗೂ ಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವ ರೈತರಿಗೆ ತ್ವರಿತವಾಗಿ ಸಹಾಯಕ್ಕೆ ಧಾವಿಸಬೇಕೆಂದು ಕರ್ನಾಟಕ ಪ್ರದೇಶ ಕಿಸಾನ್ ಕಾಂಗ್ರೆಸ್ ನ ರಾಜ್ಯ ಕಾರ್ಯದರ್ಶಿ ರೋಯ್ಸ್ ಮರ್ವಿನ್ ಫೆರ್ನಾಂಡಿಸ್ ಆಗ್ರಹಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತ ವಿರೋಧಿ ಮಸೂದೆಗಳನ್ನು ಅಂಗೀಕಾರ ಮಾಡುವುದರೊಂದಿಗೆ ರೈತರಿಗೆ ದ್ರೋಹ ಬಗೆಯುತ್ತಿದೆ. ಇತ್ತೀಚೆಗೆ ಬಂದ ನೆರೆ ಪ್ರವಾಹದಿಂದ ರೈತರು ಸಾವಿರಾರು ರೂಪಾಯಿ ನಷ್ಟ ಹೊಂದಿದ್ದು, ಫಸಲು ದೊರೆಯುವ ಸಮಯದಲ್ಲಿ ಬಂದಂತಹ ಪ್ರವಾಹದಿಂದ ರೈತರಿಗೆ ದಿಕ್ಕು ತೋಚದಂತಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಸ್ಥಳೀಯ ಆಡಳಿತದೊಂದಿಗೆ ಹೊಂದಾಣಿಕೆ ನಡೆಸಿಕೊಂಡು, ಅನ್ನದಾತರಿಗೆ ಗರಿಷ್ಠ ಪರಿಹಾರ ಒದಗಿಸಬೇಕೆಂದು ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ