ಅಧ್ಯಯನ ನಷ್ಟ-ನರ್ಸಿಂಗ್ ಕಾಲೇಜ್‌ಗೆ 1 ಕೋಟಿ ರೂ. ದಂಡ ಹೈಕೋರ್ಟ್
ಬೆಂಗಳೂರು, ಜು.4: ವಿಶ್ವ ವಿದ್ಯಾಲಯ ನಿಗದಿಪಡಿಸಿದ ಗಡುವಿನೊಳಗೆ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸದೆ ವಿದ್ಯಾರ್ಥಿಗಳಿಗೆ ಒಂದು ವರ್ಷದ ಅಧ್ಯಯನ ನಷ್ಟ ಮಾಡಿದ ಕಲಬುರಗಿಯ ಮದರ್ ಮೇರಿ ಕಾಲೇಜ್ ಆಫ್ ನರ್ಸಿಂಗ್ ಗೆ ಹೈಕೋರ್ಟ್ ಒಂದು ಕೋಟಿ ರೂ.ಗಳ ದಂಡ ಹಾಕಿದೆ.
ಮದರ್ ಮೇರಿ ಕಾಲೇಜ್ ಆಫ್ ನರ್ಸಿಂಗ್ ನ 10 ಮಂದಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ಆಲಿಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ. ನರ್ಸಿಂಗ್ ಕಾಲೇಜು ಒಂದು ವರ್ಷದ ಓದಿನ ನಷ್ಟಕ್ಕೊಳಗಾದ 10 ವಿದ್ಯಾರ್ಥಿಗಳಿಗೆ ತಲಾ 10 ಲಕ್ಷ ರೂ.ಗಳಂತೆ ಒಂದು ಕೋಟಿ ರೂ.ಗಳ ಪರಿಹಾರ ನೀಡಬೇಕು ಎಂದು ಸೂಚನೆ ನೀಡಿದೆ.
ನಿಯಮ ಪಾಲಿಸದ ಕಾಲೇಜಿನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದೂ ಸೇರಿದಂತೆ ಕಾನೂನುಗಳಡಿ ಲಭ್ಯವಿರುವ ಕ್ರಮಗಳನ್ನು ಜರುಗಿಸಬೇಕು ಎಂದು ನ್ಯಾಯಪೀಠವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ನಿರ್ದೇಶಿಸಿದೆ.
ಪ್ರಕರಣದ ಮಾಹಿತಿ: 2021-22ರಲ್ಲಿ ಮೊದಲ ವರ್ಷದ ಬಿಎಸ್ಸಿ ನರ್ಸಿಂಗ್ ಕೋರ್ಸ್‍ಗೆ ಪ್ರವೇಶ ಪಡೆದಿದ್ದ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯಕ್ಕೆ ಪೋರ್ಟಲ್ ಓಪನ್ ಮಾಡಲು ಮತ್ತು ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲು ನಿರ್ದೇಶನ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರವೇಶ ಮಾಡಿಕೊಂಡಿದ್ದರು ತಾಂತ್ರಿಕ ದೋಷದಿಂದಾಗಿ ವಿಶ್ವವಿದ್ಯಾಲಯದ ಪೋರ್ಟಲ್‍ನಲ್ಲಿ ಹೆಸರು ಮತ್ತು ವಿವರಗಳು ಅಪ್ ಲೋಡ್ ಆಗಿಲ್ಲ ಎಂದು ಅರ್ಜಿದಾರರು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.