ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಗೋಲ್ ಮಾಲ್: ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಆಗ್ರಹ
ಬೆಂಗಳೂರು: ರಾಜ್ಯದಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಗೋಲ್ಮಾಲ್ ನಡೆದಿದ್ದು, ಈ ಹಗರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು‘ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ಕೊರೊನಾ ಸೋಂಕನ್ನು ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎರಡೂ ವಿಫಲವಾಗಿದ್ದು, ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ಆಗ್ರಹಿಸಿದರು.
ಕೊರೊನಾ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ ಹಾಗೂ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ನಿಯಮ-೬೯ರ ಅಡಿಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿರುವುದನ್ನು ಸದನದಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟರು.
ಪಿಪಿಇ ಕಿಟ್, ವೆಂಟಿಲೇಟರ್ ಮತ್ತಿತರ ಪರಿಕರಗಳನ್ನು ದುಬಾರಿ ಬೆಲೆಗೆ ಖರೀದಿಸಲಾಗಿದೆ. ಪ್ರತೀ ಖರೀದಿ ಸಂದರ್ಭದಲ್ಲೂ ಬೆಲೆ ಏರಿಳಿತವಾಗಿದೆ. ಕಂಪೆನಿಗೂ ಉಪಕರಣಕ್ಕೂ ಸಂಬಂಧವಿಲ್ಲದಂತಿದೆ. ಬೆಂಗಳೂರು ವಸ್ತು ಪ್ರದರ್ಶನದ ಕೇಂದ್ರ (ಬಿಐಇಸಿ)ದ ಕೊರೊನಾ ಕೇರ್ ಸೆಂಟರ್ಗೆ ಸಂಬಂಧಿಸಿ 20 ಕೋಟಿ ರೂ. ಅವ್ಯವಹಾರ ನಡೆದಿದೆ. ಕಂಟೈನ್ಮೆಂಟ್ ವಲಯ ನಿರ್ವಹಣೆಯಲ್ಲೂ ಯದ್ವಾತದ್ವಾ ಹಣ ಖರ್ಚು ಮಾಡಲಾಗಿದೆ ಎಂದು ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು. ಖರೀದಿ ಅವ್ಯವಹಾರ ಕುರಿತು ಸಿದ್ದರಾಮಯ್ಯನಿಲುವಳಿ ಸೂಚನೆ ಮಂಡಿಸಿದರು. ಬಳಿಕ ಅದನ್ನು ನಿಯಮ 69ಕ್ಕೆ ಪರಿವರ್ತಿಸಿ ಚರ್ಚೆಗೆ ಅವಕಾಶ ಮಾಡಿಕೊಡಲಾಯಿತು.
ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ಎಡವಿದೆ. ಕೇಂದ್ರದ ಪಿಎಂ ಕೇರ್ನಿಂದ ಎಷ್ಟು ಹಣ ಬಂತು ಎಂಬ ಮಾಹಿತಿ ಇಲ್ಲ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎಷ್ಟು ಹಣ ಬಂತು, ಎಷ್ಟು ವೆಚ್ಚವಾಯಿತು ಎಂಬ ಬಗ್ಗೆಯೂ ಗೊತ್ತಿಲ್ಲ. ಎಲ್ಲದರ ಬಗ್ಗೆಯೂ ಸರ್ಕಾರ ಉತ್ತರ ನೀಡಬೇಕು ಎಂದು ಅವರು ಒತ್ತಾಯಿಸಿದರು. ಕೊರೊನಾ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ಸರ್ಕಾರ ಪ್ಯಾಕೇಜ್ ಘೋಷಿಸಿತು. ಆದರೆ ಅದು ಇನ್ನೂ ಜನರಿಗೆ ಸರಿಯಾಗಿ ಸಿಕ್ಕಿಲ್ಲ. ಕೆಲ ವರ್ಗದವರಿಗೆ ನೆರವನ್ನೆ ಸರ್ಕಾರ ನೀಡಲಿಲ್ಲ ಎಂದು ಅವರು ಆರೋಪಿಸಿದರು.
ಲಾಕ್ ಡೌನ್ ಸಮಯದಲ್ಲಿ ಸಾವನ್ನಪ್ಪಿದ ವಲಸೆ ಕಾರ್ಮಿಕರ ಬಗ್ಗೆ ಸರ್ಕಾರದ ಬಳಿ ಲೆಕ್ಕವಿಲ್ಲ, ಸುಮಾರು 971 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. 900 ಮಂದಿ ಮತ್ತಿತರ ಕಾರಣಗಳಿಂದ ಜೀವ ತ್ಯಜಿಸಿದ್ದಾರೆ, ಕೇಂದ್ರ ಸರ್ಕಾರ ಮತ್ತು ರಾಜ್ಯದ ಬಳಿ ಈ ಸಂಬಂಧ ನಿಖರವಾದ ಅಂಕಿ ಅಂಶಗಳಿಲ್ಲ ಎಂದು ಹೀಗಾಗಿ ನ್ಯಾಯಾಂಗ ತನಿಖೆಯ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.