ಅಜಿತ್ ಪವಾರ್ ಸಹಿತ 9 ಶಾಸಕರ ಅನರ್ಹತೆಗೆ ಅರ್ಜಿ ಸಲ್ಲಿಸಿದ ಎನ್‌ಸಿಪಿ

ಮುಂಬೈ: ಎಂವಿಎ ತೊರೆದು, ಶಿವಸೇನೆಯ ಏಕನಾಥ್ ಶಿಂಧೆ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಅಜಿತ್ ಪವಾರ್ ಹಾಗೂ ಎಂಟು ಮಂದಿ ಶಾಸಕರ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಸಲಾಗಿದೆ ಎಂದು ಮಹಾರಾಷ್ಟ್ರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಅಧ್ಯಕ್ಷ ಜಯಂತ್ ಪಾಟೀಲ್ ಪ್ರಕಟಿಸಿದ್ದಾರೆ.

“ಅವರ ನಡೆ ಅಕ್ರಮ. ಶರದ್ ಪವಾರ್ ಹಾಗೂ ಪಕ್ಷದ ಅನುಮತಿ ಪಡೆಯದೇ ನಿರ್ಧಾರ ಕೈಗೊಂಡಿರುವ ಅವರ ವಿರುದ್ಧ ಜಯಪ್ರಕಾಶ್ ದಂಡೆಗಾಂವ್ಕರ್ ನೇತೃತ್ವದ ಶಿಸ್ತು ಸಮಿತಿಗೆ ದೂರು ಸಲ್ಲಿಸಲಾಗಿದೆ. ಶಿಸ್ತುಸಮಿತಿಯ ಶಿಫಾರಸ್ಸಿನ ಮೇರೆಗೆ ಒಂಬತ್ತು ಶಾಸಕರ ವಿರುದ್ಧ ಅನರ್ಹತೆ ಅರ್ಜಿಯನ್ನು ಇ-ಮೇಲ್ ಮೂಲಕ ರಾಜ್ಯ ವಿಧಾನಸಭೆಗೆ ಕಳುಹಿಸಲಾಗಿದೆ” ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಇದರ ಭೌತಿಕ ಪ್ರತಿಯನ್ನು ಕೂಡಾ ಶೀಘ್ರವೇ ಸಲ್ಲಿಸಲಾಗುವುದು. ಶೀಘ್ರವೇ ಈ ಬಗ್ಗೆ ವಿಚಾರಣೆ ನಡೆಸುವಂತೆ ಸ್ಪೀಕರ್ ರಾಹುಲ್ ನರ್ವೇಕರ್ ಅವರಿಗೆ ಮನವಿ ಮಾಡಿದ್ದೇವೆ. ಇದೇ ವಿಚಾರದ ಬಗ್ಗೆ ಭಾರತದ ಚುನಾವಣಾ ಆಯೋಗವನ್ನೂ ಸಂಪರ್ಕಿಸಲಾಗಿದೆ ಎಂದು ಪಾಟೀಲ್ ವಿವರಿಸಿದರು.

“ಪಕ್ಷದ ನೀತಿಯ ವಿರುದ್ಧವಾಗಿ ನಡೆದುಕೊಂಡ ಕ್ಷಣದಿಂದಲೇ ತಾಂತ್ರಿಕವಾಗಿ ಅವರು ಅನರ್ಹರಾಗುತ್ತಾರೆ” ಎಂದು ಸ್ಪಷ್ಟನೆ ನೀಡಿದರು.

ಸುಪ್ರೀಂಕೋರ್ಟ್ನ ಇತ್ತೀಚಿನ ತೀರ್ಪಿನ ಪ್ರಕಾರ, ಪಕ್ಷ ಜಾರಿಗೊಳಿಸಿದ ವಿಪ್ ಅಧಿಕೃತ ಎಂದು ಪರಿಗಣಿಸಲಾಗುತ್ತದೆ. ಶಾಸಕರ ಸಂಖ್ಯೆ ಇಲ್ಲಿ ಲೆಕ್ಕಕ್ಕೆ ಬರುವುದಿಲ್ಲ. ಆದ್ದರಿಂದ ಜಿತೇಂಧ್ರ ಅವದ್ ಅವರನ್ನು ಪಕ್ಷದ ಅಧಿಕೃತ ವಿಪ್ ಎಂದು ಪರಿಗಣಿಸಲಾಗಿದ್ದು, ಇವರ ಆದೇಶ ಎಲ್ಲ ಶಾಸಕರಿಗೆ ಅನ್ವಯವಾಗುತ್ತದೆ ಎಂದು ವಿಶ್ಲೇಷಿಸಿದರು.

Leave a Reply

Your email address will not be published. Required fields are marked *

error: Content is protected !!