ಉಡುಪಿ ನೆರೆ ಹಾನಿ: ₹290 ಕೋಟಿ ನಷ್ಟ ಅಂದಾಜು
ಉಡುಪಿ: ಜಿಲ್ಲೆಯಲ್ಲಿ ಸೆ.19 ಹಾಗೂ 20 ರಂದು ಸುರಿದ ವಿಪರೀತ ಮಳೆಗೆ ₹ 290 ಕೋಟಿ ಹಾನಿ ಸಂಭವಿಸಿದೆಂದು ಪ್ರಾಥಮಿಕ ವರದಿಯಲ್ಲಿ ಅಂದಾಜಿಸಲಾಗಿದೆ.
ಜಿಲ್ಲಾಡಳಿತ ನೀಡಿದ ಅಂಕಿ ಅಂಶಗಳ ಪ್ರಕಾರ ಈವರೆಗೆ 138 ಮನೆಗಳಿಗೆ ಹಾನಿಯಾಗಿ ಒಂದು ಕೋಟಿ ರೂ. ಅಧಿಕ ನಷ್ಟ ಉಂಟಾಗಿದೆ. ವಿವಿಧ ತಾಲೂಕು ಕಚೇರಿಗಳ ಮೂಲಗಳ ಪ್ರಕಾರ ಈ ವರೆಗೆ ದೊರೆತ ಅಧಿಕೃತ ಮಾಹಿತಿಯಂತೆ ಜಿಲ್ಲೆಯ ಆರು ತಾಲೂಕುಗಳಲ್ಲಿ ಒಟ್ಟು 92 ಮನೆಗಳಿಗೆ ಹಾನಿಯಾಗಿದ್ದು, ಸುಮಾರು 91 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.
ಕಾಪು ತಾಲೂಕಿನಲ್ಲಿ 28 ಮನೆಗಳಿಗೆ 34.89ಲಕ್ಷ ರೂ., ಉಡುಪಿ 28 ಮನೆಗಳಿಗೆ 32.64ಲಕ್ಷ ರೂ., ಬ್ರಹ್ಮಾವರ 25 ಮನೆಗಳಿಗೆ 18.45ಲಕ್ಷ ರೂ., ಕಾರ್ಕಳ 6 ಮನೆಗಳಿಗೆ 1.80ಲಕ್ಷ ರೂ., ಬೈಂದೂರು 4 ಮನೆಗಳಿಗೆ 3 ಲಕ್ಷ ರೂ. ಮತ್ತು ಕುಂದಾಪುರದಲ್ಲಿ ಒಂದು ಮನೆಗೆ 25 ಸಾವಿರ ರೂ. ನಷ್ಟ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ
ಜಿಲ್ಲೆಯಲ್ಲಿ ನೆರೆಹಾನಿ ನಷ್ಟದ ಕುರಿತು ಇಲಾಖೆಗಳಿಂದ ಪ್ರಾಥಮಿಕ ವರದಿ ಪಡೆಯಲಾಗಿದ್ದು, ಸದ್ಯ ₹ 290 ಕೋಟಿ ಹಾನಿಯಾಗಿರುವುದು ಕಂಡುಬಂದಿದೆ. ಎಲ್ಲ ಇಲಾಖೆಗಳಿಂದ ನಷ್ಟದ ವಿವರ ಪಡೆದ ಬಳಿಕ ಸ್ಪಷ್ಟ ಮಾಹಿತಿ ತಿಳಿಯಲಿದೆ. ಬಳಿಕ ನಷ್ಟದ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುವುದು ಎಂದು ಮಾಹಿತಿ ಜಿಲ್ಲಾಧಿಕಾರಿ ಜಿ.ಜಗದೀಶ್ ನೀಡಿದರು.
ಉಡುಪಿ, ಕಾಪು, ಬ್ರಹ್ಮಾವರ ತಾಲ್ಲೂಕು ಮಹಾಮಳೆಗೆ ಹೆಚ್ಚು ನಲುಗಿದ್ದವು. ಜಿಲ್ಲಾಡಳಿತದ ಅಂಕಿ ಅಂಶಗಳ ಪ್ರಕಾರ 67 ಮನೆಗಳು ಮಾತ್ರ ಸಂಪೂರ್ಣ ಕುಸಿದಿವೆ. ಆದರೆ, ನೂರಾರು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ. ಜಿಲ್ಲಾಡಳಿತ ನೆರೆಹಾನಿ ಅಂದಾಜು ವಿವರವನ್ನು ಸಂಗ್ರಹಿಸುತ್ತಿದೆ.
ಸದ್ಯ ಮಳೆ ಕ್ಷೀಣವಾಗಿದ್ದು ಕಾಳಜಿ ಕೇಂದ್ರಗಳಿಂದ ಮನೆಗಳಿಗೆ ತೆರಳಿರುವ ಸಂತ್ರಸ್ತರು, ಮನೆಯ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ. ಭಾಗಶಃ ಬಿದ್ದ ಗೋಡೆಗಳನ್ನು ರಿಪೇರಿ ಮಾಡುತ್ತಿದ್ದಾರೆ.
ಸಾವಿರಾರು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಎಲೆಕ್ಟ್ರಾನಿಕ್ಸ್ ಉಪಕರಣಗಳು ಕೆಟ್ಟುಹೋಗಿವೆ. ಟಿ.ವಿ, ರೆಫ್ರೆಜರೇಟರ್ ಸೇರಿದಂತೆ ಕೆಟ್ಟ ಗೃಹೋಪಯೋಗಿ ವಸ್ತಗಳನ್ನು ದುರಸ್ತಿಗೆ ಕೊಂಡೊಯ್ಯುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡುಬಂತು.
ವಾಹನಗಳಿಗೆ ಹಾನಿ: ಬನ್ನಂಜೆ, ಮೂಡನಿಡಂಬೂರು, ಬೈಲಕೆರೆ, ಕಲ್ಸಂಕ, ಮಠದಬೆಟ್ಟು, ಆದಿ ಉಡುಪಿ ಹಾಗೂ ಕೃಷ್ಣಮಠದ ಸುತ್ತಮುತ್ತಲಿನ ಬಡಾವಣೆಗಳು ಮಳೆಯಿಂದ ಜಲಾವೃತ ಗೊಂಡಿದ್ದರಿಂದ ಮನೆಯ ಮುಂದೆ ಹಾಗೂ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದ ನೂರಾರು ಬೈಕ್‌ಗಳು, ಕಾರುಗಳು ಮುಳುಗಿ ಹೆಚ್ಚಿನ ಹಾನಿ ಸಂಭವಿಸಿದೆ. ಕೆಟ್ಟುನಿಂತಿದ್ದ ವಾಹನಗಳನ್ನು ಮಾಲೀಕರು ದುರಸ್ತಿ ಮಾಡಿಸಲು ಗ್ಯಾರೇಜ್‌ಗಳಿಗೆ ಸಾಗಿಸಿದರು.
ಮಹಾಮಳೆಗೆ ಮನೆಯಲ್ಲಿದ್ದ ವಸ್ತುಗಳು ತೇಲಿಹೋಗಿವೆ. ಹಾಸಿಗೆ ಸಹಿತ, ಮನೆ ಬಳಕೆಯ ಸಾಮಗ್ರಿಗಳು ಕೊಚ್ಚಿಕೊಂಡು ಹೋಗಿದ್ದು, ನಗರದಲ್ಲಿ ಅಲ್ಲಲ್ಲಿ ಹರಿಯುತ್ತಿದ್ದ ಹಳ್ಳ, ತೋಡುಗಳಲ್ಲಿ ಸಿಲುಕಿದ್ದ ದೃಶ್ಯ ಕಂಡುಬಂತು. ಜತೆಗೆ, ಬಟ್ಟೆ–ಬರೆಗಳು ಕೆಸರಿನಲ್ಲಿ ತೊಯ್ದು ಸಂಪೂರ್ಣ ಹಾಳಾಗಿವೆ.
ಗುಂಡಿಬಿದ್ದ ರಸ್ತೆಗಳು: ಭಾರಿ ಮಳೆಗೆ ನಗರದ ಹಲವು ರಸ್ತೆಗಳು ಹಾಳಾಗಿದ್ದು, ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಒಳಚರಂಡಿ ವ್ಯವಸ್ಥೆ ಕಟ್ಟಿಕೊಂಡಿದ್ದು, ನೆರೆ ಪೀಡಿತ ಪ್ರದೇಶಗಳು ಗಬ್ಬು ನಾರುತ್ತಿದೆ. ಮಳೆನೀರು ಸರಾಗವಾಗಿ ಹರಿಯುವ ತೋಡುಗಳು ಕೂಡ ಅಲ್ಲಲ್ಲಿ ಕಟ್ಟಿಕೊಂಡು ಸಮಸ್ಯೆ ಸೃಷ್ಟಿಯಾಗಿದೆ. ಉಡುಪಿ ತಾಲ್ಲೂಕಿನಲ್ಲಿ ತೋಟಗಾರಿಕಾ ಬೆಳೆಗಳಿಗೂ ಹೆಚ್ಚಿನ ಹಾನಿ ಸಂಭವಿಸಿದೆ. ಕಂದಾಯ ಅಧಿಕಾರಿಗಳು ಹಾನಿ ಸಮೀಕ್ಷೆ ನಡೆಸುತ್ತಿದ್ದು, ಇನ್ನಷ್ಟೇ ಸಂಪೂರ್ಣ ನಷ್ಟ ಮಾಹಿತಿ ದೊರೆಯಬೇಕಾಗಿದೆ.