ರಾಜ್ಯಾದ್ಯಂತ ಭ್ರಷ್ಟ ಸರಕಾರಿ ಅಧಿಕಾರಿಗಳ ಮನೆ- ಕಚೇರಿಗೆ ಲೋಕಾಯುಕ್ತ ದಾಳಿ

ಬೆಂಗಳೂರು: ರಾಜ್ಯಾದ್ಯಂತ ಇಂದು ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.

ಭ್ರಷ್ಟಾಚಾರ ಆರೋಪಗಳು ಹಾಗೂ ಆದಾಯ ಮೀರಿ ಆಸ್ತಿ ಸಂಪಾದನೆ ಆರೋಪಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯ ಹಲವೆಡೆ ದಾಳಿ ಮಾಡಿದ್ದು, ಅಧಿಕಾರಿಗಳ ಮನೆ ಮತ್ತು ಕಚೇರಿಗಳಲ್ಲಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

ಕೆ.ಆರ್.ಪುರಂ ತಹಶೀಲ್ದಾರ್ ಅಜಿತ್ ರೈ ಮನೆ ಸೇರಿದಂತೆ 10 ಕಡೆ ಲೋಕಾಯುಕ್ತ ದಾಳಿ ಮಾಡಿದ್ದು, ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ನಡೆಯುತ್ತಿದೆ. ದಾಳಿ ವೇಳೆ ಅಜಿತ್ ಮನೆಯಲ್ಲಿ 40 ಲಕ್ಷಾಂತರ ರೂ. ನಗದು ಪತ್ತೆಯಾಗಿದೆ. ಅಜಿತ್ ಕೆಲ ದಿನಗಳ ಹಿಂದೆ ಕೆ.ಆರ್.ಪುರಂನಿಂದ ವರ್ಗಾವಣೆಯಾಗಿದ್ದರು. ಇವರ ಮೇಲೆ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿಬಂದಿತ್ತು. ಈ ಹಿಂದೆ ಕೂಡಾ ಲೋಕಾಯುಕ್ತ ಅಧಿಕಾರಿಗಳು ಅವರ ಮನೆ ಮೇಲೆ ದಾಳಿ ಮಾಡಿದ್ದಾರೆ.

ಬಾಗಲಕೋಟೆಯಲ್ಲಿ ದಾಳಿ: ಬಾಗಲಕೋಟೆಯಲ್ಲಿ ಸಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿದ್ಯಾಗಿರಿಯಲ್ಲಿರುವ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ಬೀಳಗಿ ಸಹಾಯಕ ನಿರ್ದೇಶಕ ಕೃಷ್ಣ ಶಿರೂರ ಮನೆಗಳಲ್ಲಿ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ಪರಿಶೀಲಿಸಿದ್ದಾರೆ.

ಅವರ ಕಚೇರಿಗಳಲ್ಲಿ ಸಹ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು ಚೇತನಾ ಪಾಟೀಲ ಚುನಾವಣೆ ವೇಳೆ ವರ್ಗಾವಣೆಗೊಂಡಿದ್ದರು. ಕೆಲ ದಿನಗಳ ಹಿಂದೆ ಅವರು ಇದೇ ಕಚೇರಿಗೆ ಮರಳಿ ಬಂದಿದ್ದರು. ಲೋಕಾಯುಕ್ತ ಡಿವೈಎಸ್ಪಿಗಳಾದ ಶಂಕರ ರಾಗಿ, ಪುಷ್ಪಲತಾ ನೇತೃತ್ವದ ತಂಡ ಪರಿಶೀಲನೆ ನಡೆಸುತ್ತಿದೆ.

ಶಿವಮೊಗ್ಗ, ಚಾಮರಾಜನಗರದಲ್ಲಿ ಲೋಕಾಯುಕ್ತ ದಾಳಿ: ಖಾತೆ ಬದಲಾವಣೆಗೆ ವ್ಯಕ್ತಿಯೊಬ್ಬರಿಂದ 15 ಸಾವಿರ ರೂಪಾಯಿ ಲಂಚ ಪಡೆಯುವಾಗ ಸೊರಬ ಪುರಸಭೆಯ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಸೊರಬ ಪುರಸಭೆಯ ಎಫ್ ಡಿಎ ಚಂದ್ರಕಲಾ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದವರಾಗಿದ್ದಾರೆ.

ಇ ಸ್ವತ್ತು ಮಾಡಿಕೊಡಲು 1 ಲಕ್ಷ ರೂಪಾಯಿ ಲಂಚಕ್ಕೆ ಬೆಂಡಿಕೆ ಇಟ್ಟಿದ್ದ ನಗರಸಭೆ ಕಂದಾಯ ನಿರೀಕ್ಷಕ ಚಾಮರಾಜನಗರದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

Leave a Reply

Your email address will not be published. Required fields are marked *

error: Content is protected !!