ಉದ್ಯಮಗಳು ನೆಲಕಚ್ಚಿದೆ, ಮೆಸ್ಕಾಂ ಸರಕಾರದ ಸಹಾಯದಿಂದ ರಿಯಾಯಿತಿ ಘೋಷಿಸಿ:ಲೋಬೊ

ಮಂಗಳೂರು: ವಿದ್ಯುತ್ ಬಿಲ್ಲುಗಳನ್ನು ನಿಗದಿತ ಅವಧಿಯಲ್ಲಿ ಪಾವತಿ ಮಾಡದಿದ್ದರೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸುವ ಮೆಸ್ಕಾಂ ನಿರ್ಧಾರದ ವಿರುದ್ಧ ಮಾಜಿ ಶಾಸಕರಾದ ಜೆ. ಆರ್. ಲೋಬೊರವರು ಮೆಸ್ಕಾಂ ಕಛೇರಿಗೆ ಭೇಟಿ ನೀಡಿ ಅಧೀಕ್ಷಕ ಇಂಜಿನಿಯರ್ ಗೆ ಮನವಿ ಸಲ್ಲಿಸಿದರು.

 ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕರಾದ ಜೆ. ಆರ್. ಲೋಬೊ, ಕೋವಿಡ್-19 ಸಂಕಷ್ಟ ಸಂದರ್ಭದಲ್ಲಿ ಮಾರ್ಚ್ ತಿಂಗಳಿಂದ ಕೇಂದ್ರ ಸರಕಾರ ವಿಧಿಸಿದ ಲಾಕ್ ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದೆ ಜನಸಾಮಾನ್ಯರು ಆರ್ಥಿಕವಾಗಿ ತುಂಬಾ ತೊಂದರೆಗಿಡಾಗಿದ್ದಾರೆ. ಮೆಸ್ಕಾಂ ಸಂಸ್ಥೆಯು ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಯಾವುದೇ ಮನೆಗೆ ಭೇಟಿ ನೀಡದೆ ಕಛೇರಿಯಲ್ಲಿ ಕುಳಿತು ಕೊಂಡು ಬಿಲ್ ಹಾಕಲಾಯಿತು.

ಕೆಲವರಿಗಂತು ತಿಂಗಳಿಗೆ ಪಾವತಿಸುವ  ಬಿಲ್ಲುಗಳಿಗಿಂತ ಅಧಿಕವಾಗಿ ಕಟ್ಟಲು ಬಂದಿರುತ್ತದೆ ಹಾಗೂ ಜನಸಾಮಾನ್ಯರು ಕಟ್ಟದೆ ಇದ್ದ ಬಿಲ್ ಗೆ ಬಡ್ಡಿ ಸೇರಿಸಿ ಅವರನ್ನು ಕಟ್ಟುವಂತೆ ಮತ್ತು ಪಾವತಿಸದಿದ್ದರೆ ಅವರ ಮನೆಗೆ ಭೇಟಿ ನೀಡಿ ಅವರ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸುವ ಮೆಸ್ಕಾಂ ನಿರ್ಧಾರ  ಕೆಲಸವಿಲ್ಲದೆ ಕಷ್ಟದಲ್ಲಿರುವವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಪ್ರಸ್ತುತ ಜನಸಾಮಾನ್ಯರು ಕೊರೋನ ಮಹಾಮಾರಿಯಿಂದ ಹಾಗೂ ಇನ್ನಿತರ ಸಮಸ್ಯೆಯಿಂದ ತಲ್ಲಣಗೊಂಡಿದ್ದಾರೆ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಬಡವರು ಕೂಲಿ ಕಾರ್ಮಿಕರು ಒಪ್ಪೊತ್ತಿನ ಊಟಕ್ಕೂ ಕಷ್ಟ ಪಡಬೇಕಾಗಿದೆ.ವಿಶೇಷವಾಗಿ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಾವಿರಾರು ಜನರು ನಿರೋದ್ಯೋಗಿಗಳಾಗಿದ್ದಾರೆ. ಹಲವಾರು ಉದ್ಯಮಗಳು ನೆಲಕಚ್ಚಿವೆ.ಈ ಉಧ್ಯಮಗಳ ಪುನರ್ಚೆತನಕ್ಕೆ ಮೆಸ್ಕಾಂ ಸಂಸ್ಥೆ ಸರಕಾರದ ಸಹಾಯದಿಂದ ರಿಯಾಯಿತಿಯನ್ನು ಘೋಷಿಸಬೇಕು.

ಆದರೆ ಮೆಸ್ಕಾಂ ಜನರ ಸಂಕಷ್ಟವನ್ನು ಅರಿಯದೆ ಏಕಾಏಕಿ ತೆಗೆದುಕೊಂಡಿರುವ ನಿರ್ಧಾರ ಅವಮಾನವೀಯ.ಕೊರೋನ ಮಹಾಮಾರಿ ಜಾಗತಿಕ ವಿಕೋಪವಾಗಿದ್ದು(Epidemic Disease Act )ಪ್ರಕಾರ   ಮೆಸ್ಕಾಂ ಅತ್ಯಂತ ಜವಾಬ್ದಾರಿಯಿಂದ ಮತ್ತು ಸೂಕ್ಷ್ಮವಾಗಿ ನಿರ್ಧಾರವನ್ನು ತೆಗೆದು ಕೊಳ್ಳಬೇಕಾಗಿದೆ.ಯಾವುದೇ ಸಂಸ್ಥೆಯು ಹಣ ವಸೂಲಿಗೆ ಕನಿಷ್ಠ ಒಂದು ತಿಂಗಳ ಅವಕಾಶ ನೀಡಬೇಕಾಗುತ್ತದೆ.ಆದರೆ ಮೆಸ್ಕಾಂ  ಒಂದು ದಿನ ಮುಂಚಿತವಾಗಿ ಪತ್ರಿಕಾ ಪ್ರಕಟಣೆ ನೀಡಿ ತನ್ನ ಬೇಜವಾಬ್ದಾರಿಯನ್ನು ಪ್ರದರ್ಶಿಸಿದೆ.

ಕೊರೋನ ಮಹಾಮಾರಿ ಸಂದರ್ಭದಲ್ಲಿ ಜನರ ಪರ ನಿಲ್ಲಬೇಕಾದ ಮೆಸ್ಕಾಂ ಜನ ವಿರೋಧಿ ನಿಲುವನ್ನು ತೆಗೆದು ಕೊಂಡಿರುವುದು ಖಂಡನೀಯ ಎಂದು ಹೇಳಿದರು. ಜನಸಾಮಾನ್ಯರ ಸಂಕಷ್ಟವನ್ನು ಅರಿತು  ಮೆಸ್ಕಾಂ ಬಳಕೆದಾರರಿಗೆ ವಿದ್ಯುತ್ ಬಿಲ್ ಪಾವತಿಸಲು ಇನ್ನಷ್ಟು ಕಾಲಾವಕಾಶ ನೀಡುವುದರ ಜೊತೆಗೆ ಕಂತುಗಳ ಮೂಲಕ ಪಾವತಿಸಲು ಅವಕಾಶ ನೀಡಬೇಕು. ಆನ್ಲೈನ್  ಮೂಲಕ ಬಿಲ್  ಪಾವತಿಸುವ ಬಳಕೆದಾರರಿಗೆ ಈಗಾಗಲೇ ಸಂಪೂರ್ಣ ಬಿಲ್ ಪಾವತಿಸುವ ಸೌಲಭ್ಯ ಮಾತ್ರ ಇದ್ದು ಇದನ್ನು ಸಡಿಲಗೊಳಿಸಿ ಅವರ ಶಕ್ತಿಗನುಸಾರವಾಗಿ ಹಣ ಪಾವತಿಸಲು ಅವಕಾಶ ಮಾಡಿಕೊಡಬೇಕು.

ಗ್ರಾಹಕರಿಗೆ ನೀಡುವ ಬಿಲ್ ನಲ್ಲಿ ಅವರು ಪಾವತಿಸುವ ಮೊತ್ತದ ಸರಿಯಾದ ವಿವರವನ್ನು ನಮೂದಿಸಬೇಕು ಎಂದು ಮೆಸ್ಕಾಂಗೆ ಮನವಿ ಮಾಡಿದರು.   ಈ ಬಗ್ಗೆ ಮಾನ್ಯ ಉಸ್ತುವಾರಿ ಸಚಿವರು, ಲೋಕಸಭಾ ಸದಸ್ಯರು, ಶಾಸಕರು ಕೇಂದ್ರ ಮತ್ತು ರಾಜ್ಯ ಸರಕಾರ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಕಾಂಗ್ರೆಸ್ ಪಕ್ಷ ಸದಾ ಜನಪರ ಕಾಳಜಿ ಇರುವ ಪಕ್ಷ. ಕೊರೋನ ಮಹಾಮಾರಿಯ ಸಂದರ್ಭದಲ್ಲಿ ಜನರ ಸಂಕಷ್ಟದಲ್ಲಿ ಭಾಗಿಯಾಗಿ ಜನ ಸೇವೆ ಮಾಡಿದ ಪಕ್ಷ. ಈ ನಿಟ್ಟಿನಲ್ಲಿ ಕೂಡ ಕಾಂಗ್ರೆಸ್ ಪಕ್ಷ ಜನರ ಜೊತೆಗಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!